ಜಿಲ್ಲೆ

ನನಗೂ ಪ್ರಜ್ವಲ್ ರೇವಣ್ಣರಿಗೂ ಯಾವುದೇ ಜಮೀನಿನ ಗಲಾಟೆ ಇಲ್ಲ : ಪ್ರೀತಂ ಗೌಡ ವ್ಯಂಗ್ಯ

ಮೈಸೂರು: ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರೊಂದಿಗೆ ಸಂಧಾನ ಸಭೆಯ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ವೈಯಕ್ತಿಕವಾಗಿ ಅವರಿಗೂ ನನಗೂ ಯಾವುದೇ ಜಮೀನಿನ ಗಲಾಟೆ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತನಾಗಿ ಪಕ್ಷ ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆ. ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರೊಂದಿಗೆ ಯಾವ ಸಂಧಾನವೂ ಇಲ್ಲ, ಏನು ಇಲ್ಲ ಎಂದರು.

ಮೈತ್ರಿ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಮೊನ್ನೆ ಹಾಸನದಲ್ಲಿ ಕಾರ್ಯಕರ್ತರ ಸಭೆ ನಡಸಿ ವಿಚಾರವನ್ನು ತಲುಪಿಸಿದ್ದೇನೆ. ಮಾಜಿ ಸಚಿವ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ನನ್ನೊಂದಿಗೆ ಮಾತನಾಡಿಲ್ಲ, ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ನನಗೆ ಅನೇಕ ಮುಖಂಡರು ಮಾತನಾಡಿದ್ದಾರೆ. ಚುನಾವಣೆ ನಡೆಯುವ ತನಕ ಎಲ್ಲವೂ ಚೆನ್ನಾಗಿ ಇದ್ದರೆ ಅದು ಚುನಾವಣೆ ಅಲ್ಲ ಎಂದ ಪ್ರೀತಮ್ ಗೌಡ, ಯಾವುದೇ ಪ್ರಶ್ನೆಗಳಿಗೂ ನೇರವಾಗಿ ಉತ್ತರ ಕೊಡುವ ಆಸಕ್ತಿ ತೋರಲಿಲ್ಲ. ಅಲ್ಲದೆ, ಪ್ರಜ್ವಲ್ ರೇವಣ್ಣ ಹೆಸರು ಪ್ರಸ್ತಾಪ ಮಾಡದೆ ಕೇವಲ ಎನ್‌ಡಿಎ ಅಭ್ಯರ್ಥಿ ಎಂದು ಪದೇ ಪದೇ ಹೇಳುವ ಮೂಲಕ ಅಸಮಾಧಾನ ಹೊರಹಾಕಿದರು.

ಹಾಸನದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಪ್ರೀತಮ್ ಗೌಡ, ನನ್ನನ್ನ ಕಾಶ್ಮೀರಕ್ಕೆ ಹೋಗು ಅಂದರೆ ಹೋಗುತ್ತೇನೆ, ಕನ್ಯಾಕುಮಾರಿಗೆ ಹೋಗು ಅಂದರೂ ಹೋಗುತ್ತೇನೆ, ಪಕ್ಷ ಹೇಳಿದ ಕಡೆ ಹೋಗುತ್ತೇನೆ. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿ. ಹಾಗಾಗಿ ನಾನು ಮೈಸೂರಿಗೆ ಬಂದಿದ್ದೇನೆ. ಇಂದು ಮೈಸೂರು, ಚಾಮರಾಜನಗರ ಕಾರ್ಯಕರ್ತರ ಸಭೆ ನಡೆಸುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹಾಸನಕ್ಕೆ ಭೇಟಿ ನೀಡಿದ್ದರು. ಯಾಕೆ ಹಾಸನಕ್ಕೆ ಹೋಗಿದ್ರಿ ಅಂತ ಕೇಳೋಕೆ ಆಗುತ್ತಾ? ನಾನು ಪಕ್ಷ ಹೇಳಿದ ಕಡೆ ಹೋಗುತ್ತೇನೆ. ನನ್ನನ್ನು ಪ್ರಜ್ವಲ್ ರೇವಣ್ಣ ಭೇಟಿಯಾಗು ವಿಚಾರ ಗೊತ್ತಿಲ್ಲ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಮಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಪ್ರೀತಮ್ ಗೌಡ ಮುಖ ನೋಡಿ ಜನರು ಮತ ಚಲಾಯಿಸುವುದಿಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡಿ ಮತ ಹಾಕುತ್ತಾರೆ. ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ ಚುನಾವಣೆ. ಪಕ್ಷ ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ ಎಂದರು.