ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರದಲ್ಲಿ ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ರಾಜಪ್ಪ, ಬಾಸೂರು ಚಂದ್ರಮೌಳಿ, ಅಶೋಕ ಇತರರಿದ್ದರು.  
ಜಿಲ್ಲೆ

ಜನರ ಕಷ್ಟಕ್ಕೆ ಸ್ಪಂದಿಸದ ಪ್ರಜ್ವಲ್

ಎಸ್.ಎನ್.ರವೀಂದ್ರ

ಕಡೂರು: ಸಂಸದ ಪ್ರಜ್ವಲ್ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕೇವಲ ಅಧಿಕಾರಕ್ಕಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರಿಂದ ಜನರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗುರುವಾರ ಚೌಳಹಿರಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಪ್ರಜ್ವಲ್ ಕಳೆದ ಬಾರಿ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾದರು. ಗೆದ್ದ ಬಳಿಕ ಕಡೂರು ಕ್ಷೇತ್ರಕ್ಕೆ ಬರಲಿಲ್ಲ. ಕ್ಷೇತ್ರದ ಸಮಸ್ಯೆ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಸಂಸದರ ಕಚೇರಿ ತೆರೆದಿದ್ದೇ ಸಾಧನೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿ 25 ಸಂಸದರು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕಕ್ಕೆ ಕೇಂದ್ರದಿಂದ 49,000 ಕೋಟಿ ಜಿಎಸ್‌ಟಿ ಪಾಲು ಬರಬೇಕಿದೆ. ಆದರೆ ಯಾವುದೇ ಸಂಸದರು ಕೇಂದ್ರ ಸರ್ಕಾರದ ಬಳಿ ಚಕಾರ ಎತ್ತುತ್ತಿಲ್ಲ. ಅದೇ ರೀತಿ ನೆಲ, ಜಲ ಮತ್ತು ಭಾಷೆ ವಿಚಾರದಲ್ಲೂ ಬಿಜೆಪಿ ಸಂಸದರು ಮೌನ ವಹಿಸುತ್ತಾರೆ. ಕೇಂದ್ರ ನಾಯಕರ ಬಳಿ ಮಾತನಾಡುವ ಧೈರ್ಯ ಅವರಿಗಿಲ್ಲ ಎಂದು ಕಿಡಿಕಾರಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಎಚ್.ಡಿ.ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇವಲ 2 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಶ್ರೇಯಸ್ ಪಟೇಲ್ ಮತ್ತು ಅವರ ತಾಯಿ ಇಬ್ಬರೇ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಂಥ ಹೋರಾಟ ಭಾವದ ಶ್ರೇಯಸ್ ಪಟೇಲ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಡಿಎಸ್‌ಎಸ್ ಮುಖಂಡ ಮೂರ್ತಿಹಾಳ್ ಕೃಷ್ಣಪ್ಪ, ಮುಖಂಡರಾದ ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸಮೂರ್ತಿ, ಯರದಕೆರೆ ರಾಜಪ್ಪ, ಮೂರ್ತಿಹಾಳ್ ಕೃಷ್ಣಪ್ಪ, ಗೋವಿಂದಪ್ಪ, ತಿಪ್ಪೇಶಪ್ಪ, ತಿಮ್ಮಲಾಪುರ ದಿನೇಶ್ ಇತರರಿದ್ದರು.
ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಡೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಹಕಾರಿಯಾಗುತ್ತದೆ. ಹಾಸನ ದೊಡ್ಡ ಲೋಕಸಭೆ ಕ್ಷೇತ್ರವಾಗಿರುವುದರಿಂದ ಅಭ್ಯರ್ಥಿ ಪ್ರತಿ ಮನೆಗೆ ಬಂದು ಮತಯಾಚನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗೆಲುವಿಗಾಗಿ ಸಂಘಟನಾತ್ಮಕವಾಗಿ ಶ್ರಮಿಸಬೇಕು.