ಜಿಲ್ಲೆ

ಉಳ್ಳಾಲಕ್ಕೂ ಪ್ರಜಾಸೌಧ! : ಕೊಣಾಜೆಯಲ್ಲಿ ನಿರ್ಮಾಣ ಯೋಜನೆ ವಿವಿ ಜಮೀನು ಬಹುತೇಕ ಫಿಕ್ಸ್: ಎಲ್ಲ ಕಚೇರಿಗಳು ಒಂದೇ ಸೂರಿನಡಿ

ಸೌಮ್ಯ ಆರ್

ಅನ್ಸಾರ್ ಇನೊಳಿ ಉಳ್ಳಾಲ

ಇದುವರೆಗೆ ಕಾಡುತ್ತಿದ್ದ ಜಮೀನಿನ ಸಮಸ್ಯೆ ನಿವಾರಣೆಯಾಗಿದೆ, ಇದಕ್ಕೆ ಪೂರಕ ಎನ್ನುವಂತೆ ಸಚಿವರ ಹೇಳಿಕೆಯೂ ಬಂದಿದೆ. ಇದರಿಂದ ಆರು ವರ್ಷಗಳ ಹಿಂದೆ ರಚನೆಯಾದ ಉಳ್ಳಾಲ ತಾಲೂಕು ಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಭಾಗ್ಯ ಒದಗಿ ಬಂದಿದೆ. ಕೊಣಾಜೆಯಲ್ಲೇ ಕಟ್ಟಡ ನಿರ್ಮಾಣ ಬಹುತೇಕ ಖಚಿತವಾಗಿದ್ದು ಎಲ್ಲ ಇಲಾಖಾ ಕಚೇರಿಗಳು ಒಂದೇ ಸೂರಿನಡಿ ಬರಲಿವೆ.

ಮೂಲ್ಕಿ ಸಹಿತ ಇತರ ಕಡೆಗಳಲ್ಲಿ ತಾಲೂಕು ರಚನೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿದ್ದವು. ಆದರೆ ಉಳ್ಳಾಲದಲ್ಲಿ ತಾಲೂಕಿನ ಬಗ್ಗೆ ಯಾವುದೇ ಬೇಡಿಕೆ ಮಾತ್ರವಲ್ಲ ಪರಿಕಲ್ಪನೆಯೂ ಜನರಲ್ಲಿ ಇರಲಿಲ್ಲ. ಆದರೂ ಒಂಭತ್ತು ವರ್ಷಗಳ ಹಿಂದೆ 2019ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಉಳ್ಳಾಲ ಕ್ಷೇತ್ರ ಶಾಸಕ ಯು.ಟಿ.ಖಾದರ್ ಮನವಿ ಮೇರೆಗೆ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಳ್ಳಾಲಕ್ಕೆ ತಾಲೂಕು ಘೋಷಿಸಿದ್ದರು.

ಅನುದಾನಕ್ಕೆ ಅಡ್ಡಿ: ವಿವಿಧ ಹಂತಗಳಲ್ಲಿ ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತಿದ್ದರೂ ಸ್ವಂತ ಕಟ್ಟಡ ನಿರ್ಮಾಣಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಕಂದಾಯ ಇಲಾಖೆ ನಾಟೆಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡದಲ್ಲಿ ಹಾಗೂ ತಾಲೂಕು ಕಚೇರಿ ದೇರಳಕಟ್ಟೆ ಬೆಲ್ಮ ಗ್ರಾಪಂ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂದಾಯ ಇಲಾಖೆ ಇರುವ ಕಟ್ಟಡ ಇಕ್ಕಟ್ಟಿನಿಂದ ಕೂಡಿದ್ದು, ತಾಲೂಕು ಕಚೇರಿ ಇರುವ ಕಟ್ಟಡ ಬೆಲ್ಮ ಗ್ರಾಪಂಗೆ ಸಭಾಂಗಣವಾಗಿ ನಿರ್ಮಿಸಲಾಗಿದ್ದರಿಂದ ಸುಸಜ್ಜಿತವಾಗಿದೆ. ಆದರೆ ಒಂದೇ ಸಭಾಂಗಣದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಬೇಕಾಗಿದೆ. ತಾಲೂಕಿನಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ ಅನುದಾನಕ್ಕೂ ಅಡ್ಡಿಯಾಗಿದೆ. ಆಡಳಿತ ವ್ಯವಸ್ಥೆ ಬಂದಲ್ಲಿ ಈ ಕಟ್ಟಡದಲ್ಲಿ ಸಭೆ ನಡೆಸಲು ಸಾಧ್ಯವಿಲ್ಲ.

8.60 ಕೋಟಿಯಲ್ಲಿ ನಿರ್ಮಾಣ

ರಾಜ್ಯದಲ್ಲಿ ಹೊಸದಾಗಿ 21 ತಾಲೂಕು ರಚನೆಯಾಗಿದ್ದು, ಅವುಗಳಿಗೆ ತಲಾ 8.60 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. 21 ತಾಲೂಕುಗಳ ಪಟ್ಟಿಯಲ್ಲಿ ಉಳ್ಳಾಲವೂ ಇದ್ದು, ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಇದರಿಂದಾಗಿ ಉಳ್ಳಾಲಕ್ಕೆ ಸುಸಜ್ಜಿತ ಪ್ರಜಾಸೌಧ ನಿರ್ಮಾಣ ಆಗುವ ನಿರೀಕ್ಷೆ ಇದೆ.

ವಿವಿಯಿಂದ ಅಂತಿಮ ನಿರ್ಧಾರ

ಉಳ್ಳಾಲ ತಾಲೂಕು ರಚನೆಯಾದ ಬಳಿಕ ಕಚೇರಿಗಳು ತೊಕ್ಕೊಟ್ಟು ಅಥವಾ ಆಸುಪಾಸಿನಲ್ಲಿ ನಿರ್ಮಾಣಗೊಳ್ಳುವ ನಿರೀಕ್ಷೆ ಇತ್ತು. ಅದಕ್ಕೆ ಅನುಗುಣವಾಗಿ ತೊಕ್ಕೊಟ್ಟು ಬಸ್ ತಂಗುದಾಣದಲ್ಲಿ ಶಿಲಾನ್ಯಾಸ ನಡೆಸಿ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡ ಬ್ಯಾರಿ ಭವನದ ಜಮೀನು ಖಾಲಿಯಿದೆ. ಆದರೆ ಇಲ್ಲಿ ತಾಲೂಕು ಕಚೇರಿ ಆರಂಭಗೊಂಡರೆ ಜನಜಂಗುಳಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನಿಗೆ ಹುಡುಕಾಟ ನಡೆಸಲಾಗಿತ್ತು. ಇದೀಗ ಕೊಣಾಜೆಯಲ್ಲೇ ಇರುವ ಮಂಗಳೂರು ವಿಶ್ವವಿದ್ಯಾಲಯದ ಜಮೀನನ್ನೇ ಅಂತಿಮಗೊಳಿಸಲಾಗಿದ್ದು ವಿವಿಯಿಂದ ಅಂತಿಮ ನಿರ್ಧಾರಕ್ಕೆ ಕಾಯಲಾಗುತ್ತಿದೆ.

ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟದಲ್ಲಿರುವ ಉಳ್ಳಾಲ ಕಂದಾಯ ಇಲಾಖೆ.
ಬೆಳ್ಮ ಗ್ರಾಪಂ ಕಟ್ಟದಲ್ಲಿರುವ ಉಳ್ಳಾಲ ತಾಪಂ ಕಾರ್ಯಾಲಯ.

ಕೊಣಾಜೆಯಲ್ಲೇ ತಾಲೂಕು ಆಡಳಿತ

ಉಳ್ಳಾಲ ತಾಲೂಕಿನಲ್ಲಿ ಈಗಾಗಲೇ ಭಾರಿ ವಾಹನ ತರಬೇತಿ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯ, ಕಾರಾಗೃಹ, ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ಎ.ಪಿ.ಜೆ ಅಬ್ದುಲ್ ಕಲಾಂ ಮಹಿಳೆಯರ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೌಲಾನ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಡಿ.ದೇವರಾಜು ಅರಸು ನರ್ಸಿಂಗ್ ವಿದ್ಯಾರ್ಥಿನಿಲಯ, ಐಟಿ ಸಂಸ್ಥೆಗಳಿದ್ದು ಇವೆಲ್ಲವೂ ಕೊಣಾಜೆ ಆಸುಪಾಸಿನಲ್ಲೇ ಇವೆ. ಅಗ್ನಿಶಾಮಕ ದಳ ಹಾಗೂ ಬ್ಯಾರಿ ಭವನವೂ ಕೊಣಾಜೆ ಸನಿಹದಲ್ಲೇ ಬರಲಿದೆ. ಇದೀಗ ಪ್ರಜಾಸೌಧ ನಿರ್ಮಾಣಕ್ಕೆ ಮಂಗಳೂರು ವಿವಿಯ ಜಮೀನು ಕೇಳಲಾಗಿದೆ.

ಮಂಗಳೂರು ವಿಶ್ವವಿದ್ಯಾಲಯದ ಜಾಗ ಯಾರಿಗೂ ಕೊಡಬಾರದು ಎನ್ನುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಸೇವಾಸೌಧ ಮತ್ತು ಮೆಸ್ಕಾಂ ಸರ್ಕಾರಿ ವ್ಯವಸ್ಥೆಗೆ ಬರುವುದರಿಂದ ಎರಡು ಎಕರೆ ಸೇವಾಸೌಧಕ್ಕೆ ಮತ್ತು ಮೆಸ್ಕಾಂಗೆ ಒಂದು ಎಕರೆ ಜಾಗ ಬಳಸಲು ನಿರ್ಧರಿಸಲಾಗಿದೆ. ಯು.ಟಿ.ಖಾದರ್ ವಿದಾನಸಭಾಧ್ಯಕ್ಷ ಉಳ್ಳಾಲ ತಾಲೂಕು ಕಚೇರಿಗಳು ಕಾರ್ಯನಿರ್ವಹಿಸಲು ಸುಸಜ್ಜಿತ ಕಟ್ಟಡದ ಅವಶ್ಯಕತೆಯಿದೆ. ಇದು ನಗರ ಭಾಗದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಭಾವಿಸಲಾಗಿತ್ತು. ಆದರೆ ಕೊಣಾಜೆ ಗ್ರಾಮದಲ್ಲೇ ತಾಲೂಕು ಕಟ್ಟಡ ನಿರ್ಮಾಣ ಆಗುವುದು ಗ್ರಾಮಕ್ಕೆ ಹೆಮ್ಮೆಯ ವಿಚಾರ, ಇದು ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ದೇವಣ್ಣ ಶೆಟ್ಟಿ, ಸದಸ್ಯ, ಕೊಣಾಜೆ ಗ್ರಾಪಂ