ಮಂಡ್ಯ: ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಫೆ.23ರಿಂದ ಮಾ.2ರವರೆಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಯ ಮುಖ್ಯ ಸಂಚಾಲಕಿ ಬಿ.ಕೆ.ಶಾರದ ತಿಳಿಸಿದರು.
ಶಿವರಾತ್ರಿ ಹಬ್ಬದ ಜತೆಯಲ್ಲಿಯೇ ಬ್ರಹ್ಮಾ ಕುಮಾರೀಸ್‌ನ ಮಂಡ್ಯ ಶಾಖೆ ಪ್ರಾರಂಭಗೊಂಡು 50 ವರ್ಷವಾದ ಹಿನ್ನಲೆ ಸ್ವರ್ಣ ಮಹೋತ್ಸವವನ್ನು ಆಚರಿಸಲಾಗುವುದು. 23ರಂದು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಬ್ರಹ್ಮಾ ಕುಮಾರೀಸ್‌ನ ಜಿಲ್ಲಾ ಸಂಚಾಲಕಿ ಬಿ.ಕೆ.ಶಾರಧಾ, ಶಾಸಕ ರವಿಕುಮಾರ್ ಗಣಿಗ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವರಾತ್ರಿ ಅಂಗವಾಗಿ ಬೆಟ್ಟದ ಗುಹೆಯೊಳಗೆ ವಿರಾಜಮಾನವಾಗಿರುವ ಅಮರನಾಥ ಶಿವಲಿಂಗ ದರ್ಶನ, ದ್ವಾದಶ ಜ್ಯೋತಿಲಿಂಗಗಳ ದರ್ಶನ, ಒಂದೇ ಸ್ಥಳದಲ್ಲಿ ಸುಪ್ರಸಿದ್ದ 12 ಜ್ಯೋತಿಲಿಂಗಗಳಾದ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ವೈದ್ಯನಾಥೇಶ್ವರ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರ, ವಿಶ್ವೇಶ್ವರ, ತ್ರಯಂಬಕೇಶ್ವರ, ಕೇದಾರನಾಥ, ಪೃಷ್ಟೇಶ್ವರ ದರ್ಶನ, ಈ ಬಾರಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ 21 ಅಡಿ ಉದ್ದದ ಮಾತನಾಡುವ ಕುಂಭಕರ್ಣ ಮತ್ತು ಇದೇ ಮೊದಲ ಬಾರಿಗೆ ಚೈತನ್ಯ ದೇವಿಯರ ದರ್ಶನ, ಒಂದೇ ಸ್ಥಳದಲ್ಲಿ ಸಹಸ್ರಾರು ಶಿವಲಿಂಗಗಳನ್ನು ದರ್ಶನವಿರಲಿದೆ. ಇದಲ್ಲದೆ ಪ್ರತಿದಿನ ಸಂಜೆ 6.30 ರಿಂದ 8.30 ವರೆಗೆ ಪ್ರಸಿದ್ದ ಗಾಯಕರಿಂದ ಗಾಯನ, ಕಲಾವಿದರಿಂದ ನೃತ್ಯ ಕಾರ್ಯಕ್ರಮ ಮತ್ತು ಆಧ್ಯಾತ್ಮಿಕ ಪ್ರವಚನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಯ ಸುಬ್ಬಣ್ಣ, ಕುಮಾರ್, ಪ್ರಶಾಂತ್ ಇದ್ದರು.