ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರದಲ್ಲಿಯೂ ಜೆಡಿಎಸ್ ಗೆದ್ದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ನಿಮ್ಮ ತಾಲೂಕಿನಲ್ಲಿ ಯಾವುದಾದರೂ ಬದಲಾವಣೆ ತಂದಿದ್ದಾರಾ?. ಸಕ್ಕರೆ ಕಾರ್ಖಾನೆ, ನೀರಾವರಿ ವಿಚಾರ, ಸರ್ವತೋಮುಖ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡಿದ್ದಾರೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ನಾಯಕರು ಮಾತೆತ್ತಿದರೆ ನಾನು ರೈತನ ಮಕ್ಕಳೆಂದು ಕಣ್ಣೀರು ಹಾಕುತ್ತಾರೆ. ಕಣ್ಣೀರು ಬರುವುದು ಸಹಜ. ನಕ್ಕರೂ ಕಣ್ಣಲ್ಲಿ ನೀರು ಬರುತ್ತದೆ. ಅತ್ತರೂ ಕಣ್ಣಲ್ಲಿ ನೀರು ಬರುತ್ತದೆ. ಭಗವಂತ ನಿಮಗೆ ವರ ಅಥವಾ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅವಕಾಶ ಸಿಕ್ಕಾಗ ನಾವು ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರನ್ನು 2 ಬಾರಿ ಸಿಎಂ ಹಾಗೂ ಒಮ್ಮೆ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದೀರಿ. ನಾನು ನಿಮ್ಮ ಮನೆ ಮಗನಾಗಿದ್ದು, ನನಗೂ ಒಂದು ಅವಕಾಶ ಮಾಡಿಕೊಡಿ. ನಾನು ಈ ಜಿಲ್ಲೆಯಲ್ಲಿ ಹುಟ್ಟಿಲ್ಲ. ಆದರೆ ಈ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ಅಭ್ಯರ್ಥಿಯಲ್ಲ. ಡಿ.ಕೆ.ಶಿವಕುಮಾರ್ ಅಭ್ಯರ್ಥಿ ಎಂದು ತಿಳಿದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದ ಅವರು, ಮನುಷ್ಯನಿಗೆ ನಂಬಿಕೆ ಮುಖ್ಯ. ನಾವು ಮಾತು ಕೊಡುವುದಕ್ಕಿಂತ ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ. ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಬೇಕು. ಇದನ್ನು ಜೆಡಿಎಸ್ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಚಲುವರಾಯಸ್ವಾಮಿ ಅವರು ತಮಗೆ ಅಕಾಶ ಸಿಕ್ಕಾಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಕಾಂಗ್ರೆಸ್ ಕೂಡ ಸಿಕ್ಕ ಅವಕಾಶದಲ್ಲಿ ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ನಾನು ದೇವೇಗೌಡರ ಕುಟುಂಬದ ವಿರುದ್ಧ ರಾಜಕೀಯವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ಪಕ್ಷ ಹೇಳಿದ ಕಾರಣಕ್ಕೆ ಎಲ್ಲ ರಾಜಕೀಯ ಭಿನ್ನಾಭಿಪ್ರಾಯ ಮರೆತು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅವರಿಗೆ ಬೆನ್ನೆಲುಬಾಗಿ ನಿಂತೆ. ಮೈತ್ರಿ ಸರ್ಕಾರ ಇದ್ದಷ್ಟು ದಿನ ನಮ್ಮ ಪ್ರಾಮಾಣಿಕತೆಯಲ್ಲಿ ಕಿಂಚಿತ್ತೂ ಲೋಪ ಬಾರದಂತೆ ನಡೆದುಕೊಂಡಿದ್ದೇವೆ ಎಂದರು.
ಚಲುವರಾಯಸ್ವಾಮಿ ಅವರನ್ನು ನಾನು ನಾಗಮಂಗಲಕ್ಕೆ ಮಾತ್ರ ಸೀಮಿತ ಮಾಡಿಲ್ಲ. ಪಕ್ಷದ ಉಪಾಧ್ಯಕ್ಷರಾಗಿ ಅವರು ಈ ಭಾಗದ ಬೇರೆ ಜಿಲ್ಲೆಗಳಲ್ಲೂ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ. ಕುಮಾರಸ್ವಾಮಿ ಅವರು ನಾವು ಕೊಟ್ಟ ಬೆಂಬಲ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬಂದಿದೆ. ಇದಕ್ಕೆ ಕಾರಣ ಯಾರು ಎಂದು ಆಲೋಚಿಸಬೇಕು. ಭಾನುವಾರ ಮೋದಿ ಅವರು ಮಂಡ್ಯಕ್ಕೆ ಬಂದಿದ್ದರು. ಅವರು ಕೇವಲ ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆಯೇ ಹೊರತು ಜೆಡಿಎಸ್ ಬಗ್ಗೆ ಒಂದೂ ಮಾತನಾಡಿಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷ ವೈರಿಯೇ ಹೊರತು ಜೆಡಿಎಸ್ ಅಲ್ಲ ಎಂಬುದು ಅರ್ಥವಾಗಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ಕೊಟ್ಟ ಕೊಡುಗೆ ಬಿಟ್ಟರೆ, ಈಗ 5 ವರ್ಷದ ಅವಧಿಯಲ್ಲಿ ಒಂದೇ ಒಂದು ಹೊಸ ಅನುದಾನ ತರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೆವು. ತಾಲೂಕಿನ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ರೂ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ನಾಲೆಗಳ ಆಧುನೀಕರಣ ಮಾಡಲಾಗಿದೆ. ಆದರೆ ನಮ್ಮ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಭಿವೃದ್ಧಿ ಕೆಲಸ ಕೂಡ ಪೂರ್ಣಗೊಂಡಿಲ್ಲ. ಕಳೆದ ಬಾರಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ. ನನ್ನ ಸೋಲಿಸಲು ಪದೇ ಪದೇ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋದರು. ಅಧಿಕಾರ ಸಿಕ್ಕಾಗ ಒಮ್ಮೆಯೂ ನಿಮ್ಮ ಕಷ್ಟ ಸುಖ ಆಲಿಸಲು ಬರಲಿಲ್ಲ. ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ಮಾಡಲಿಲ್ಲ. ರಾಜ್ಯದ ಜನರ ಬದುಕಿಗಾಗಿ ಕಾಂಗ್ರೆಸ್ ಗೆಲ್ಲಿಸಬೇಕು. ಎಲ್ಲ ವರ್ಗದ ಜನರಿಗೆ ಯೋಜನೆ ತಂದಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಜನಪರ ಕಾಳಜಿ ಇರುವ ಪಕ್ಷವಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಬಿ.ರಾಮಕೃಷ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಇತರರಿದ್ದರು.