ಜಿಲ್ಲೆ

23ಕ್ಕೆ ಕೋಲಾರದಲ್ಲಿ ಪ್ರಜಾಧ್ವನಿ ಬಸ್‌ಯಾತ್ರೆ: ಕೆಪಿಸಿಸಿ ಉಪಾಧ್ಯಕ್ಷ ಸೀತಾರಾಮ್ ಮಾಹಿತಿ

ಕೋಲಾರ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ದುರಾಡಳಿತವನ್ನು ಜನತೆಗೆ ತಿಳಿಸಲು ರಾಜ್ಯಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಂಡಿದ್ದು, ಜ. 23ರಂದು ಕೋಲಾರ ಜಿಲ್ಲೆಗೆ ಆಗಮಿಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಮ್ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪ್ರಜಾಧ್ವನಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಹಲವೆಡೆ ಪ್ರಜಾಧ್ವನಿ ಬಸ್ ಯಾತ್ರೆ ನಡೆಸಲಾಗಿದೆ. ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ್ಲ 6 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯಗಳನು ಬಿಟ್ಟು ಮತ್ತೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂದು ತೋರಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರವೇ ಸಾಮಾನ್ಯ ಜನರ ಉಳಿಯುತ್ತದೆ ಎಂಬುದು ಅರ್ಥವಾಗಿದೆ. ಜನರಿಗೆ ಕಾಂಗ್ರೆಸ್ ಅಭಿವೃದ್ಧಿ ಬೇಕು ಹೊರತು ಬಿಜೆಪಿಯ ಶ್ರೀಮಂತರ ಅಭಿವೃದ್ಧಿಯಲ್ಲ. ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಜನ ತೋರಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಂಎಲ್ಸಿ ನಜೀರ್ ಅಹಮದ್ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ವರ್ಧೆ ವಿಚಾರವಾಗಿ ಪ್ರತಿಪಕ್ಷದವರು ಮಾತಾಡಿಕೊಳ್ಳಲಿ. ನಮ್ಮ ಕೆಲಸ ಕಾಂಗ್ರೆಸ್ ಪಕ್ಷದ ಸಂಘಟನೆಯಾಗಬೇಕು. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಸರಕಾರವಾಗಿದೆ. ಅದರಿಂದಲೇ ರಾಜ್ಯಾದ್ಯಂತ ನಡೆಸಿದ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಾರಿಯೂ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಲಿದ್ದಾರೆ ಎಂದರು.

ಶಾಸಕರಾದ ರಮೇಶ್ ಕುಮಾರ್, ಮುಖಂಡರಾದ ಊರಬಾಗಿಲು ಶ್ರೀನಿವಾಸ್, ಜಯದೇವ್, ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಅಬ್ದುಲ್ ಖಯ್ಯೂಮ್, ಮಂಜುನಾಥ್, ಸೀಸಂದ್ರ ಗೋಪಾಲಗೌಡ, ಲಕ್ಷ್ಮೀನಾರಾಯಣ್, ರಾಮಯ್ಯ, ರಾಜು ಶ್ರೀನಿವಾಸಪ್ಪ, ಮುರಳಿ, ಇಕ್ಬಾಲ್, ಜಗನ್ ಜಗದೀಶ್, ಇದ್ದರು.

ರಾಜಕೀಯ ಶಕ್ತಿ ಪ್ರದರ್ಶನ
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜ.23 ರಂದು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ಪ್ರದರ್ಶನಗೊಳ್ಳಬೇಕಾಗಿದೆ, ವಿರೋಧಿಗಳು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಒಗ್ಗಟ್ಟು ಮತ್ತು ಶಕ್ತಿ ಏನು ಎಂಬುದು ಜ.23ರಂದು ಸುಮಾರು 50-60 ಸಾವಿರ ಜನ ಸೇರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.