ಚಿತ್ರದುರ್ಗ: ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸುತ್ತಿದ್ದು, ಡಿಕೆಶಿ ನೇತೃತ್ವದ ಯಾತ್ರೆ ಫೆ.9ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಹೇಳಿದರು.
ಈಗಾಗಲೇ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರಲ್ಲಿ ಸಂಚರಿಸಿರುವ ಯಾತ್ರೆ, 9ರಂದು ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂದು ಸಂಜೆ 5 ಗಂಟೆಗೆ ಬಹಿರಂಗಸಭೆ ಆಯೋಜಿಸಲಾಗಿದೆ ಎಂದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ‌್ಯಾಧ್ಯಕ್ಷ ಸಲೀಂ ಅಹಮದ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಎಚ್.ಸಿ.ಮಹಾದೇವಪ್ಪ, ಎಚ್.ಆಂಜನೇಯ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಇತರರು ಆಗಮಿಸಲಿದ್ದಾರೆ ಎಂದು ಹೇಳಿದರು.
2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ನಾನು ಅದಕ್ಕಾಗಿ ಬೇಸರಿಸದೆ ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಈ ಬಾರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಲಕ್ಷ್ಮೀ ಕಾಂತ್, ಡಿ.ಎನ್.ಮೈಲಾರಪ್ಪ, ನಾಗರಾಜ್ ಜಾನ್ಹವಿ, ಡಿ.ಟಿ.ವೆಂಕಟೇಶ್, ಮಹಡಿ ಶಿವಮೂರ್ತಿ, ಪ್ರಕಾಶ್ ರಾಮನಾಯ್ಕ, ಅನಿಲ್ ಇತರರು ಇದ್ದರು.