ತುಮಕೂರು: ಆಹಾರ ಉತ್ಪನ್ನ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದರೂ ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಲಾಕ್‌ಡೌನ್ ಮುಂದುವರಿಸಿರುವ ಜಿಲ್ಲಾಡಳಿತ ನಿರ್ಧಾರದ ಬಗ್ಗೆ ಜಿಲ್ಲೆಯೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ವಾರ್ಷಿಕ 800ಕೋಟಿ ರೂ., ವಹಿವಾಟು ನಡೆಸುವ ಮಾರುಕಟ್ಟೆಯಲ್ಲಿ ಲಾಭದ ಲೆಕ್ಕಾಚಾರ ಗಮನಿಸದೆ ಜನಹಿತಕ್ಕಾಗಿ ಮಾರುಕಟ್ಟೆ ಮುಚ್ಚಲಾಗಿದೆ.
ಕೊಬ್ಬರಿ ಆಹಾರ ಉತ್ಪನ್ನವಾದರೂ ಕರ್ನಾಟಕದಲ್ಲಿ ಹೇಳಿಕೊಳ್ಳುವ ಮಾರುಕಟ್ಟೆ ಇಲ್ಲ, ತಿಪಟೂರಿನಿಂದ ಪ್ರತಿನಿತ್ಯ ಕನಿಷ್ಠ 200 ಲಾರಿ ಲೋಡು ಮಹಾರಾಷ್ಟ್ರ, ಮುಂಬೈ, ನಾಗಪುರ ಹಾಗೂ ಕೇರಳದ ಕೊಚ್ಚಿನ್ ಮಾರುಕಟ್ಟೆಗೆ ಸಾಗಣೆಯಾಗುತ್ತಿತ್ತು. ಮಹಾರಾಷ್ಟ್ರ , ಮುಂಬೈ, ಕೇರಳದಲ್ಲಿ ಕರೊನಾ ಹಾವಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಚಾಲಕರು ಓಡಾಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಲಾಕ್‌ಡೌನ್ ಅವಧಿ ಪೂರ್ಣಗೊಂಡ ಬಳಿಕ ಕೊಬ್ಬರಿ ಸರಬರಾಜಿಗೆ ಅವಕಾಶವನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿರಾಕರಿಸಿದೆ.
ಕೋಲ್ಡ್‌ಸ್ಟೋರೇಜ್ ಇಲ್ಲ!: ಹೆಚ್ಚು ಆದಾಯ ತರುವ, ಅತೀ ಹೆಚ್ಚು ಕೊಬ್ಬರಿ ಉತ್ಪಾದಿಸುವ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ತಿಪಟೂರು ಅಥವಾ ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿಯನ್ನು ಶೇಖರಿಸಿಡುವ ಶೀತಲಗೃಹವಿಲ್ಲ. ರೈತರು ಕೊಬ್ಬರಿಯನ್ನು ಸುಲಿಯದೇ ಮುಂದೂಡುವುದರಿಂದ ಸಂರಕ್ಷಿಸುವುದು ಸುಲಭ. ಹಾಗಾಗಿ, ಜಿಲ್ಲೆಯೆಲ್ಲೆಡೆ ಕೊಬ್ಬರಿ ಸುಲಿಯುವುದು ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಕೊಬ್ಬರಿ, ಕಾಯಿ ಸುಲಿದು ಬದುಕುತ್ತಿರುವ ಕಾರ್ಮಿಕರಿಗೆ ಸ್ವಲ್ಪ ತೊಂದರೆಯಾಗಿದೆ.
ಕೊಬ್ಬರಿಗಿಂತ ಕೌಟು ಇನ್ನೂ ಕಷ್ಟ!: ಕೊಬ್ಬರಿಯನ್ನು ಕನಿಷ್ಠ ತಾಪಮಾನದಲ್ಲಿ ಕೆಲವು ದಿನ ಸಂರಕ್ಷಿಸುವುದು ಸಾಧ್ಯವಿದೆ. ಆದರೆ, ಕೆಟ್ಟಕೊಬ್ಬರಿ (ಕೌಟು) ಸಂರಕ್ಷಣೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ವರ್ತಕರು ಅಂಗಡಿ ತೆರೆಯುವುದಿಲ್ಲ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕರೊನಾ ಭೀತಿ ಕಡಿಮೆಯಾದರಷ್ಟೇ ತಿಪಟೂರು ಕೊಬ್ಬರಿ, ಕೌಟಿಗೆ ಬೇಡಿಕೆ, ಇಲ್ಲದಿದ್ದರೆ ರೈತರು ಮತ್ತಷ್ಟು ದಿನ ಪರಿತಪಿಸಲೇಬೇಕು.
ಎಲ್ಲಿಯೂ ಮಾರಾಟ ನಡೆಯುತ್ತಿಲ್ಲವಾದರೂ ಪ್ರಸ್ತುತ ಕ್ವಿಂಟಾಲ್ ಕೊಬ್ಬರಿ ಮಾರುಕಟ್ಟೆ ಬೆಲೆ 11000 ರೂ., ಇದೆ. ಕೆಲವು ಗ್ರಾಮೀಣ ಭಾಗದಲ್ಲಿ ಅಲ್ಪಸ್ವಲ್ಪ ಕೊಬ್ಬರಿ ಕೊಂಡುಕೊಳ್ಳಲಾಗುತ್ತಿದ್ದು ರೈತರಿಗೆ ಬೆಲೆ ಕಡಿಮೆ ಕೊಡಲಾಗುತ್ತಿದೆ. ತುರ್ತು ಇರುವ ರೈತರು ಇಂತಹ ವರ್ತಕರಿಗೆ ಕೊಬ್ಬರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.
ಸಿಎಂ ಪರಿಹಾರ ನಿಧಿಗೆ 1 ಕೋಟಿ ದೇಣಿಗೆ!: ಬ್ಯಾಡಗಿ ನಂತರ ಅತೀ ಹೆಚ್ಚು ವಾರ್ಷಿಕ 800 ಕೋಟಿ ರೂ., ಆರ್ಥಿಕ ವಹಿವಾಟು ನಡೆಸುವ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗಲು ಮುಖ್ಯಮಂತ್ರಿ ಹೆಸರಿನಲ್ಲಿ ಸ್ಥಾಪಿತವಾಗಿರುವ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದೆ. ಆರ್ಥಿಕ ಲಾಭಕ್ಕೆ ಯಾವುದೇ ಮಹತ್ವ ನೀಡದೆ ಮಾರುಕಟ್ಟೆಯನ್ನೂ ಸಂಪೂರ್ಣ ಸ್ಥಗಿತಗೊಳಿಸಿ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಜನಸ್ನೇಹಿಯಾಗಿದೆ.
ಕೊಬ್ಬರಿ ಮಾರುಕಟ್ಟೆ ಆರಂಭಿಸಲು ಸರ್ಕಾರ ಅನುಮತಿ ನೀಡಿದೆಯಾದರೂ ನೆರೆ ರಾಜ್ಯದ ಮಾರುಕಟ್ಟೆ ಅವಲಂಬಿಸಿರುವ ಕೊಬ್ಬರಿ ರಫ್ತು ಸಂದರ್ಭದಲ್ಲಿ ಎದುರಾಗಬಹುದಾದ ಅಪಾಯ ಊಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಮಾರುಕಟ್ಟೆಯನ್ನು ಮತ್ತಷ್ಟು ದಿನ ಮುಚ್ಚಲು ತೀರ್ಮಾನಿಸಲಾಗಿದೆ. ಎಪಿಎಎಂಸಿ ಆಡಳಿತ ಮಂಡಳಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ. ನ್ಯಾಮಗೌಡ ಕಾರ್ಯದರ್ಶಿ ತಿಪಟೂರು ಎಪಿಎಂಸಿ ಕೊಬ್ಬರಿ ಖರೀದಿಸಿದರೆ ಅದನ್ನು ಶೇಖರಿಸಿಡುವುದು ಕಷ್ಟ. ಬೇಸಿಗೆಯಲ್ಲಿ ಗುಣಮಟ್ಟದ ಕೊಬ್ಬರಿಯಾದರೆ ಗರಿಷ್ಠ 15 ದಿನ ಕಾಪಾಡಬಹುದು ಹಾಗಾಗಿ, ಕೊಬ್ಬರಿ ಸುಲಿಯದಿದ್ದರೆ ಅದನ್ನು ಕಾಪಾಡುವುದು ಸುಲಭ. ಮೊದಲು ಜೀವ ಉಳಿಸಿಕೊಳ್ಳೊಣ, ನಂತರ ಮಾರುಕಟ್ಟೆ ಆರಂಭಿಸೋಣ. ನಾವು ಮತ್ತಷ್ಟು ದಿನ ಕಾಯಲು ಸಿದ್ಧರಿದ್ದೇವೆ, ರೈತರಿಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ, ಜಿಲ್ಲಾಡಳಿತದ ನಿರ್ಧಾರ ಸ್ವಾಗತಾರ್ಹ. ಎಸ್.ಬಿ.ಶರತ್ ಕೊಬ್ಬರಿ ವರ್ತಕ, ಹುಳಿಯಾರು