ಮಂಡ್ಯ: ಅತ್ಯಾಚಾರ ಮಾಡಿ ಜೈಲಿಗೆ ಹೋಗಿ ಬಂದವನಿಗೆ ಅವರ ಕುಟುಂಬದ ಹೆಣ್ಣು ಮಕ್ಕಳು ಆರತಿ ಮಾಡಿ ಸ್ವಾಗತ ಮಾಡುತ್ತಾರೆ. ಮಹಿಳೆಯೊಬ್ಬರು ನನ್ನ ಮೇಲೆ ಅತ್ಯಾಚಾರ ಮಾಡಿರುವುದು ಇಂತಹ ವ್ಯಕ್ತಿಯೇ ಎಂಬುವ ಮಾತನ್ನು ಮಾಧ್ಯಮದ ಮುಂದೆ ಹೇಳಿದ್ದರೂ ಅಂತಹ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತಾನೆ. ಇದು ನಮ್ಮ ವೈಫಲ್ಯ ಎಂದು ಸಾಹಿತಿ ಡಾ.ಎಚ್.ಎಸ್.ಅನುಪಮಾ ಬೇಸರ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘ, ಬೆಳಗಿನೊಳಗು ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಜ್ಞಾ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯ ಸಮಾಜವು ಜಾತಿ, ಧರ್ಮ ಹಾಗೂ ಹಣ ಎನ್ನುವ ಕಟ್ಟುಕಥೆಯ ಮೇಲೆ ನಿಲ್ಲುವ ಮೂಲಕ ಅದರಲ್ಲಿಯೇ ಜೀವನ ನಡೆಸುತ್ತಿರುವುದು ದುರಂತ. ಪ್ರೀತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆ ಹುಡುಗಿಯನ್ನ ಕೊಂದವನ ಫೋಟೋಗಳನ್ನು ಕಟೌಟ್‌ನಲ್ಲಿ ಹಾಕಿಕೊಂಡು ಮೆರವಣಿಗೆ ಮಾಡುತ್ತಿರುವ ಸನ್ನಿವೇಶದಲ್ಲಿ ಇದ್ದೇವೆ ಎಂದರು.
ಯಾವುದನ್ನು ಕ್ಷುಲ್ಲಕ ಎನ್ನುತ್ತೇವೆಯೋ ಅದರಲ್ಲಿ ಆಳವಾಗಿ ವಿಷಯ ಅಡಗಿರುತ್ತದೆ. ಮನುಷ್ಯನ ಬದುಕಲ್ಲಿ ಹೊರಂಗಣ ಗ್ರಹಿಸುವುದು ಮುಖ್ಯವಾಗಬೇಕು. ನಮ್ಮೊಳಗೆ ನಾವು ಸರಿ ತಪ್ಪುಗಳನ್ನು ತಿಳಿದುಕೊಳ್ಳಬೇಕಿದೆ. ವಿಕಾಸವಾದದ ಮನುಷ್ಯರ ಮೆದುಳು ಅಂದರೆ ಮುಮ್ಮೆದುಳು ಶೇ.15 ರಷ್ಟು ಇರುತ್ತದೆ. ಇದು ಅಭಿವೃಕ್ತಿ ಮನೋಭಾವವನ್ನು ತಿಳಿಸುತ್ತದೆ ಅದನ್ನು ಬಳಸಿಕೊಳ್ಳಬೇಕು. ಸರಿ ಮತ್ತು ತಪ್ಪು, ನ್ಯಾಯ ಮತ್ತು ಅನ್ಯಾಯವನ್ನು ಏಕೆ ನಾವು ವಿವೇಚನೆ ಮಾಡುತ್ತಿಲ್ಲ. ಪ್ರಕೃತಿಯು ಪದೇ ಪದೇ ಎಚ್ಚರಿಸುತ್ತಿದೆ. ಸುನಾಮಿ, ಕೋವಿಡ್ ಸೇರಿದಂತೆ ವಿವಿಧ ರೀತಿಯಲ್ಲಿ ಪರಿಸರದ ಮೂಲಕವೇ ಜಾಗೃತಿ ನೀಡುತ್ತಿದ್ದರೂ ನಾವು ಬದಲಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಶಿಬಿರ ಉದ್ಘಾಟಿಸಿದ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಮಾತನಾಡಿ, ಸಮಾಜದಲ್ಲಿ ನಮ್ಮ ಕೆಲಸವೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಪ್ರಾಣಿ, ಪಕ್ಷಿಗಳಿಗೆ ನಮ್ಮಷ್ಟು ಬುದ್ಧಿವಂತಿಕೆ ಇರುವುದಿಲ್ಲ. ಮಾನವರಾದ ನಾವು ಸಮಾಜಕ್ಕೆ ಒಳಿತಾಗುವ ಕೆಲಸವನ್ನು ನಾವು ಮಾಡಿಕೊಂಡು ಬರಬೇಕು. ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಬೆಳಗಿನೊಳಗು ಬಳಗದ ವಿನೋದ್ ಮಹದೇವಪುರ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ಇಂದ್ರಾಣಿ ಭಾಗವಹಿಸಿದ್ದರು.