ಜಿಲ್ಲೆ

‘ಪ್ರಧಾನಮಂತ್ರಿ ಉಜ್ವಲ’ ಅತ್ಯುತ್ತಮ ಯೋಜನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಚ್.ಆರ್.ಉಮಾ ಹೇಳಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮುಕ್ತಗಂಗೋತ್ರಿ ನಳ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮೀಣ ಕರ್ನಾಟಕದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಾಮಾಜಿಕ-ಆರ್ಥಿಕ ಮೌಲ್ಯಮಾಪನ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.


ಗ್ರಾಮೀಣ ಮತ್ತು ನಗರ ಪ್ರದೇಶದ ಅಂತರವನ್ನು ಕಡಿಮೆ ಮಾಡುವಲ್ಲಿ ಮತ್ತು ಮಹಿಳೆಯರು ಕಟ್ಟಿಗೆ ಬಳಕೆಯನ್ನು ಕಡಿಮೆ ಮಾಡುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ಜತೆಗೆ ಕಟ್ಟಿಗೆಗಳನ್ನು ಸಂಗ್ರಹಿಸುವ ಉಳಿತಾಯವಾದ ಸಮಯವನ್ನು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತೆ ಮಾಡಿದೆ ಎಂದು ಹೇಳಿದರು.


ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ ಮಾತನಾಡಿ, ಈ ಯೋಜನೆಯಿಂದ ಜನರ ಬದುಕು ಉಜ್ವಲವಾಗಿದೆ. ಜನರು ಸಾಂಪ್ರದಾಯಿಕ ಬದುಕು ಬಿಟ್ಟು ಹೊಸತನಕ್ಕೆ ಹೊಂದಿಕೊಳ್ಳಬೇಕು. ಜನರು ತಾವು ಬದಲಾಗಿದ್ದೇವೆ ಎಂದು ಹೇಳುವಂತಾದರೆ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧ್ಯ. ಇಲ್ಲವಾದರೆ ಸರ್ಕಾರಗಳು ಉಚಿತ ಯೋಜನೆಗಳ ಮೂಲಕ ಹಣ ವ್ಯಯಿಸುವುದು ಮುಂದುವರಿಯುತ್ತಲೇ ಇರುತ್ತದೆ ಎಂದರು.


ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೊಳಿಸಿದ ಪ್ರಧಾನಮಂತ್ರಿ ಉಜ್ವಲ ಯೋಜನೆ ಯಶಸ್ವಿಯಾಗಿದೆ. ಆದರೆ ಅದರ ಬಳಕೆಯಲ್ಲಿ ಕೆಲವು ವ್ಯತ್ಯಾಸವಾಗಿದೆ. ಅದಕ್ಕೆ ಕಾರಣ ಜನರೇ ಹೊರತು ಸರ್ಕಾರವಲ್ಲ ಎಂದರು.


ಗ್ರಾಮೀಣ, ಕಾಡಿನ ಹಾಡಿಗಳ ಹಾಗೂ ಕೊಳೆಗೇರಿ ಪ್ರದೇಶ ಸೇರಿದಂತೆ 10.32 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು. ಆದರೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಬಳಕೆ ಪ್ರಮಾಣ ಕಡಿಮೆ ಇದೆ. ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯ ಸರ್ಕಾರವೂ ಪರಿಷ್ಕರಿಸಿ ಹೊಸ ಯೋಜನೆ ರೂಪಿಸಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಜತೆಗೆ ಸಬ್ಸಿಡಿಯಿಂದ ಸಿಗುವ ಗ್ಯಾಸ್ ಸಿಲಿಂಡರ್ ವಾಣಿಜ್ಯ ಬಳಕೆಗೆ ಮಾರಾಟ ಮಾಡುವುದು ಅಧಿಕವಾಗಿದೆ. ಸರ್ಕಾರ ಒಳ್ಳೆಯ ಉದ್ದೇಶದಿಂದ ಯೋಜನೆ ಜಾರಿ ಮಾಡಿದರೆ ಅದು ಸದ್ಬಳಕೆ ಆಗಬೇಕು ಎಂದರು.


ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಅರ್ಥಶಾಸ್ತ್ರ ವಿಭಾಗದ ಪ್ರೊ.ರಮಾನಂದ, ಐಸಿಎಸ್‌ಎಸ್‌ಆರ್ ಯೋಜನಾ ನಿರ್ದೇಶಕಿ ಡಾ.ಆರ್.ಎಚ್.ಪವಿತ್ರಾ ಇನ್ನಿತರರಿದ್ದರು.