ರಾಯಚೂರಿನ ಆಯುಷ್ ಇಲಾಖೆ ಸಭಾಂಗಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಯೋಗ ಸ್ಪರ್ಧೆ ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಉದ್ಘಾಟಿಸಿದರು. ತರಬೇತುದಾರ ಡಾ.ತಿಮ್ಮಪ್ಪ ವಡ್ಡೆಪಳ್ಳಿ, ಪ್ರಮುಖರಾದ ಡಾ.ಪೂಜಾ, ಡಾ.ನವೀನ್, ಡಾ.ಅರ್ಪಿತಾ ಇತರರಿದ್ದರು. 
ಜಿಲ್ಲೆ

ಆರೋಗ್ಯ ವೃದ್ಧಿಗೆ ಯೋಗಾಭ್ಯಾಸ ಮಾಡಿ

ರಾಯಚೂರು: ಯೋಗ ದಿನದ ಈ ವರ್ಷದ ಘೋಷವಾಕ್ಯ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಆಗಿದ್ದು, ವಿದ್ಯಾರ್ಥಿಗಳು ನಿತ್ಯ ಅಭ್ಯಾಸ ಮಾಡುವ ಮೂಲಕ ಆರೊಗ್ಯ ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಹೇಳಿದರು.

ನಗರದ ಆಯುಷ್ ಇಲಾಖೆ ಸಭಾಂಗಣದಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಯೋಗ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿತ್ಯ ಯೋಗ ಮಾಡುವುದರಿಂದ ಆಗುವ ಲಾಭಗಳು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ್ ಮಾತನಾಡಿ, ಅನಾದಿ ಕಾಲದಿಂದಲೂ ಯೋಗಕ್ಕೆ ಮಹತ್ವವಿದೆ. ದೀರ್ಘ ಕಾಲದವರೆಗೆ ಆರೋಗ್ಯವಂತರಾಗಿ ಜೀವಿಸಲು ಯೋಗ ಸಹಕಾರಿ. ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಯೋಗದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಯೋಗ ತರಬೇತುದಾರ ಡಾ.ತಿಮ್ಮಪ್ಪ ವಡ್ಡೆಪಳ್ಳಿ, ಪ್ರಮುಖರಾದ ಡಾ.ಪೂಜಾ, ಡಾ.ನವೀನ್, ಡಾ.ಅರ್ಪಿತಾ ಇತರರಿದ್ದರು.