ಜಿಲ್ಲೆ

ನಿತ್ಯ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿ

ಕಿಕ್ಕೇರಿ: ಯೋಗ ಆರೋಗ್ಯಕ್ಕೆ ಸಂಜೀವಿನಿಯಾಗಿ ಕೆಲಸ ಮಾಡಲಿದ್ದು, ನಿತ್ಯ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿ ಎಂದು ಆಯುಷ್ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಸಲಹೆ ನೀಡಿದರು.


ಸಮೀಪದ ಮಂದಗೆರೆಯಲ್ಲಿ ಸರ್ಕಾರಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಸೋಮವಾರ ಹೇಮಾವತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 10 ದಿನಗಳ ಯೋಗೋತ್ಸವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.


ಪತಂಜಲಿ ಮುನಿಗಳು ಇಡೀ ವಿಶ್ವಕ್ಕೆ ನೀಡಿದ ಕೊಡುಗೆ ಯೋಗವಾಗಿದೆ. ಗುಣಪಡಿಸಲಾಗದ ನೂರಾರು ರೋಗಗಳು ಯೋಗದಿಂದ ಗುಣವಾಗಲಿವೆ. ಯೋಗ ಮಾನಸಿಕ, ದೈಹಿಕ, ಬುದ್ಧಿವಿಕಸನ, ನೆನಪಿನ ಶಕ್ತಿ, ಏಕಾಗ್ರತೆಗೆ ಮದ್ದಾಗಿದೆ ಎಂದರು.


ಯೋಗದ ಪ್ರತಿ ಆಸನದಲ್ಲಿಯೂ ಒಂದೊಂದು ಚಿಕಿತ್ಸಾ ಗುಣವಿದೆ. ನುರಿತ ಗುರುಗಳಿಂದ ಕಲಿತು ಯೋಗಾಭ್ಯಾಸ ಮಾಡಿ. ವಿದ್ಯಾರ್ಥಿಗಳು ತಪ್ಪದೆ ಯೋಗ, ಧ್ಯಾನ, ಪ್ರಾಣಾಯಾಮ ಮಾಡಿ, ಓದಿಗೆ ಬಹಳ ಅನುಕೂಲವಾಗಲಿದೆ. ಪರೀಕ್ಷೆ ವೇಳೆಯಲ್ಲಿ ಧ್ಯಾನ, ಶೀತಲಿ, ಭ್ರಮರಿ ಅಭ್ಯಾಸ ಮಾಡುವುದರಿಂದ ಬಹಳ ಪ್ರಯೋಜನವಾಗಲಿದೆ. ನಮ್ಮ ದೇಸಿ ಸಂಸ್ಕೃತಿಯಲ್ಲಿ ಒಂದಾದ ಯೋಗವನ್ನು ಇಂದು ಪಾಶ್ಚಾತ್ಯರು ನಮ್ಮಲ್ಲಿಗೆ ಬಂದು ಕಲಿತು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ಹಿತ್ತಲ ಗಿಡದ ಮದ್ದು ಅದನ್ನು ಬದುಕಿಗೆ ಅಳವಡಿಸಿಕೊಂಡು ಆರೋಗ್ಯವಂತರಾಗಿ ಬದುಕಲು ಮುಂದಾಗಬೇಕು ಎಂದು ತಿಳಿ ಹೇಳಿದರು.


ಜು.21ರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಶಿಬಿರದ ಅಂತಿಮ ದಿನ ಮಕ್ಕಳಿಂದ ಸಾಮೂಹಿಕ ಯೋಗ ಕಾರ್ಯಕ್ರಮವಿದೆ. ಅಂದು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರಶಂಸನ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.


ಮುಖ್ಯಶಿಕ್ಷಕ ಎನ್.ಇ. ಶೇಖರ್, ಇಂದ್ರೇಶ್, ರೋಹಿತ್, ರಾಜಶೇಖರ್, ಯೋಗ ಶಿಬಿರಾರ್ಥಿ ಪ್ರಸನ್ನ, ಮಂಜುಳಾ ಹಾಜರಿದ್ದರು.