ಕಡಬ: ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಸಕಲ ಫಲಗಳು ಪ್ರಾಪ್ತಿಯಾಗಿ ಬದುಕಿನ ಉನ್ನತ್ತಿಯಾಗುತ್ತದೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ಬಹಳಷ್ಟು ವಿಶೇಷತೆ ಪಡೆದಿದೆ. ಮನಪೂರ್ವಕ ನಂಬಿಕೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.
ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆದ ಪಂಚಮಿ ಮಹೋತ್ಸವದಲ್ಲಿ ಆಶೀರ್ವಚನ ಮಾಡಿದರು.
ದೇವಸ್ಥಾನದ ಆನುವಂಶಿಕ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಜತೆ ಕಾರ್ಯದರ್ಶಿ ಪದ್ಮನಾಭ ದೋಳ, ಸದಸ್ಯರಾದ ಸೀತಾರಾಮ ರೈ ಸವಣೂರು, ಬಾಲಕೃಷ್ಣ ಗೌಡ ನೂಜಿ, ನಿಟ್ಟೋಣಿ ಕೆಡೆಂಜಿ, ಅರ್ಚಕ ರಮಾನಂದ್ ಭಟ್, ಕಾಯಂ ಆಹ್ವಾನಿತ ಸದಸ್ಯರಾದ ಡಾ.ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ಜತ್ತಪ್ಪ ರೈ ಬರೆಪ್ಪಾಡಿ, ಸುರೇಶ್ ಕಾಪಿನಕಾಡು, ತಾರಾನಾಥ ರೈ ನಗ್ರಿ ಮತ್ತು ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಯಂನಿವೃತ್ತಿ ಹೊಂದಿದ ದೇವಸ್ಥಾನದಲ್ಲಿ ಸಿಬ್ಬಂದಿ ಶೇಷಪ್ಪ ಗೌಡ ನೂಜಿ ಅವರನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸನ್ಮಾನಿಸಿದರು.
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತಿಸಿ ನಿರೂಪಿಸಿದರು.
ಪಂಚಮಿ ಪ್ರಯುಕ್ತ ದೇವರಿಗೆ ಹೊರೆಕಾಣಿಕೆ ಸಮರ್ಪಣೆ, ಪಂಚಾಮೃತಾಭಿಷೇಕ ಮತ್ತು ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಶಾಂತಿಮೊಗರು ಮತ್ತು ಊರವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ ನಡೆಯಿತು.
ಶನಿವಾರ ಷಷ್ಠಿ ಮಹೋತ್ಸವ ಅಂಗವಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ದೇವರಿಗೆ ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು, ಶ್ರೀ ಭೂತಬಲಿ ಮಹೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ದೇವರ ಬಲಿ ಒಳಗಾಗಿ ವೈದಿಕ ಮಂತ್ರಾಕ್ಷತೆ ನಡೆಯಿತು.