ಜಿಲ್ಲೆ

ಸರಳವಾಗಿ ಬದುಕುವುದನ್ನು ರೂಢಿಸಿಕೊಳ್ಳಿ: ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ

ಮೈಸೂರು: ನಮ್ಮ ಬದುಕನ್ನು ಕ್ಲಿಷ್ಟ ಮಾಡಿಕೊಂಡು ಬದುಕುವುದಕ್ಕಿಂತ ಸರಳವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ನೇಗಿಲ ಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದಿಂದ ಜಯನಗರದ ನ್ಯಾಯಾಲಯದ ಎದುರು ಇರುವ ನೇಗಿಲ ಯೋಗಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸತ್ಸಂಗದಲ್ಲಿ ಪ್ರವಚನ ನೀಡಿದರು.
ಬದುಕನ್ನು ಸಾಧ್ಯವಾದಷ್ಟು ಎಲ್ಲ ಭವ-ಬಂಧನಗಳಿಂದ ಮುಕ್ತಗೊಂಡು ಜೀವನ ಸರಳ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಾವು ಜೀವನವನ್ನು ಸರಳ ಮಾಡಿಕೊಳ್ಳುವುದು ಎಂದರೆ, ಮನುಷ್ಯನ ಅಂತರಂಗದ ಎಲ್ಲ ನೋವುಗಳನ್ನು ತೊಡೆದು ಹಾಕಲೇಬೇಕು ಎಂದು ಹೇಳಿದರು.
ತಪಸ್ಸು ಮಾಡುವುದು ಎಂದರೆ ಎಲ್ಲೋ ಹೋಗಿ ಮಾಡುವುದು ಎಂಬರ್ಥವಲ್ಲ. ಜೀವನವನ್ನು ಸರಳ ಮಾಡಿಕೊಳ್ಳುವುದು ಎಂದರ್ಥ ಎಂದು ಬಣ್ಣಿಸಿದರು.
ಮನುಷ್ಯ ದಿನನಿತ್ಯ ಚಟುವಟಿಕೆಗಳನ್ನು ಲವಲವಿಕೆಯಿಂದ ಕೂಡಿರಬೇಕಾದರೆ, ಸತ್ಸಂಗ, ದೇವರ ಭಜನೆಗಳ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು ಎಂದರು.
ನಾವು ನಾಲ್ಕು ಗ್ರಾಂ ಚಿನ್ನವನ್ನು ಮೈಮೇಲೆ ಹಾಕಿಕೊಂಡರೆ ಬಾಹ್ಯ ಸೌಂದರ್ಯ ಮತ್ತಷ್ಟು ಹೆಚ್ಚಿಸುತ್ತದೆ. ಆದರೆ, ಆ ನಾಲ್ಕು ಗ್ರಾಂ ಚಿನ್ನವನ್ನು ಶೋಧಿಸಲು ಸಾವಿರ ಟನ್ ಅದಿರನ್ನು ಭೂಮಿಯಿಂದ ತೆಗೆದು ನಾಲ್ಕು ಗ್ರಾಂ ಚಿನ್ನ ಬೇರ್ಪಡಿಸಬೇಕು. ಚಿನ್ನದ ಆಸೆಗಾಗಿ ಭೂಮಿಯನ್ನು ಬಗೆದು, ಪರಿಸರವನ್ನು ನಾಶ ಮಾಡಿ ನಾವು ಚಿನ್ನ ಮೈ ಮೇಲೆ ಹಾಕಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.
ಚಿನ್ನವನ್ನು ಹಾಕಿಕೊಳ್ಳಲು ಭಾರಿ ಪ್ರಮಾಣದ ಮಣ್ಣನ್ನು ಗುಡ್ಡೆ ಹಾಕುವಂತೆ ಮನಃಶಾಂತಿ ಬೇಕು ಎಂದು ಇಲ್ಲದ ಬಾಹ್ಯ ಚಿಂತನೆಗಳನ್ನು ನಾವು ನಮ್ಮ ಮನಸ್ಸಿನಲ್ಲಿ ಹಾಕಿಕೊಳ್ಳುತ್ತಿದ್ದೇವೆ. ನಾಲ್ಕು ಗ್ರಾಂ ಚಿನ್ನ ಸೌಂದರ್ಯ ಹೆಚ್ಚಿಸುತ್ತದೆ. ಆದರೆ ಕೆ.ಜಿ.ಗಟ್ಟಲೆ ಚಿನ್ನ ಹಾಕಿಕೊಂಡರೆ ಹೇಗೆ ಸಹಿಸಲು ಸಾಧ್ಯವಿಲ್ಲವೋ ಹಾಗೆ ಚಿಂತನೆಗಳನ್ನು ಮೈ ಮೇಲೆ ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಹೊಟ್ಟೆ ಹಸಿವಾದರೆ, ಊಟ ಮಾಡಬೇಕು. ಒಂದು ಗಿಡಕ್ಕೆ ರೋಗ ಬಂದರೆ, ಅದನ್ನು ನಿವಾರಿಸಲು ರಾಸಾಯನಿಕ ಸಿಂಪಡಿಸಬೇಕು. ಆದರೆ ಬೇರಿಗೆ ರೋಗ ಬಂದರೆ ಏನು ಮಾಡಬೇಕು ಎಂಬ ಯಕ್ಷ ಪ್ರಶ್ನೆ ಕಾಡುತ್ತದೆ. ಮನಸ್ಸಿಗೆ ಕಾಯಿಲೆ ಬಂದರೆ ಸರಿಪಡಿಸಬಹುದು. ಬುದ್ಧಿಗೆ ಕಾಯಿಲೆ ಬಂದರೆ ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ ಎಂದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿರುವ ಇಂತಹ ಸತ್ಸಂಗ ಧಾರ್ಮಿಕ ಕಾರ್ಯಕ್ರಮಗಳನ್ನು ನಾವು ಬಳಸಿಕೊಂಡು ಬಾಹ್ಯ ಚಿಂತನೆಗಳಿಂದ ಹೊರಬಂದು ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜನರ ಸಂತೋಷಕ್ಕಾಗಿ, ಸಮಾಜ ಏಳಿಗೆಗೆಗಾಗಿ ಇಂತಹ ಕಾರ್ಯಕ್ರಮಗಳು ಬೇಕಾಗುತ್ತವೆ. ನಮ್ಮ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ರಾಮಮಂದಿರಗಳಿವೆ. ಆ ಮಂದಿರಗಳ ಮೂಲಕ ಸಮಾಜದಲ್ಲಿ ಒಂದಿಷ್ಟು ಸ್ವಾಸ್ಥೃದಿಂದಿಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಗಳ ಪಾದಪೂಜೆ ಹಾಗೂ ಹಿರಿಯ ನಾಗರಿಕರರಿಗೆ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ನೇಗಿಲ ಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾ ರಮೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ, ಪೊಲೀಸ್ ಒಕ್ಕಲಿಗರ ಸಂಘದ ಅಧ್ಯಕ್ಷ ಧನಂಜಯ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಟ್ರಸ್ಟಿ ಇಂದ್ರೇಶ್ ಇತರರು ಇದ್ದರು.