ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಳಿಹಾಳಿಯಲ್ಲಿ ಮುತ್ತು ಪೋಣಿಸಿದಂತೆ ಅಕ್ಷರ ಬರೀಬೇಕು. ಎಳೆ ಯವಸ್ಸಿನಲ್ಲಿ ಸುಂದರ ಬರಹ ರೂಢಿಸಿಕೊಳ್ಳುವ ಮಗು ಜೀವನದುದ್ದಕ್ಕೂ ಶಿಸ್ತು ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳುವರು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.
ಎಚ್. ಎಫ್. ಕಟ್ಟಿಮನಿ ಜನ್ಮದಿನ ನಿಮಿತ್ತ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಸಂಘದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪುಸ್ತಕ ಪಂಚಮಿ ದುಂಡು ಬರಹ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರು ಕೆಲಸಕ್ಕೆ ತೆಗೆದುಕೊಳ್ಳುವಾಗ ಸುಂದರ ಬರಹ ಇದ್ದವರಿಗೆ ಆದ್ಯತೆ ನೀಡುತ್ತಿದ್ದರು. ಭಾಷೆ ಬಹಳ ದೊಡ್ಡ ವಸ್ತು. ಇದನ್ನು ಮಕ್ಕಳು ಈಗಲೇ ತಿಳಿದುಕೊಳ್ಳಬೇಕು. ಭಾಷೆಗೆ ನಾಲ್ಕು ಆಯಾಮಗಳಿವೆ. ಮೊದಲನೇ ಆಯಾಮ ಓದುವುದು. ಎರಡನೇ ಆಯಾಮ ಬರೆಯುವುದು. ಮೂರನೆಯದು ಮಾತನಾಡುವುದು. ಕೊನೆಯದು ಬಹು ಮುಖ್ಯವಾದದ್ದು ಮಾತನಾಡಿದ್ದು ತಿಳಿಯುವಂತಿರಬೇಕು. ಭಾಷಾ ವಿಜ್ಞಾನಿ ಪ್ರಕಾರ ಈ ಆಯಾಮಗಳು ಇದ್ದಾಗಲೇ ಒಂದು ಭಾಷೆಯಲ್ಲಿ ಪರಿಪೂರ್ಣತೆ ಹೊಂದಲು ಸಾಧ್ಯ. ಅದಕ್ಕಾಗಿ ಮಕ್ಕಳು ಒಂದು ಭಾಷೆ ಕಲಿಯುವಾಗ ಕೇಳುತ್ತಾ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ದುಂಡಾಗಿ ತಪ್ಪಿಲ್ಲದಂತೆ ಬರೆಯುವುದೂ ಒಂದು ಕಲೆ. ಬರವಣಿಗೆ ಬಗ್ಗೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಶ್ರದ್ಧೆ ಮುಖ್ಯ. ಬರೆಯುವವನ ಮನಸ್ಥಿತಿಯನ್ನು ನಾವು ಬರವಣಿಗೆಯಿಂದಲೇ ಕಾಣಬಹುದು ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದುಂಡು ಬರಹ ಸ್ಪರ್ಧೆ ವಿಜೇತರಿಗೆ ನಗದು ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಎಚ್.ಎಫ್. ಸಮುದ್ರಿ, ಆಲಕನೂರ ಕಟ್ಟಿಮನಿ, ನಾಗಯ್ಯ ಹಿರೇಮಠ, ಇತರರು ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ವಿ.ಎನ್. ಕೀರ್ತಿವತಿ ನಿರೂಪಿಸಿದರು. ಜಯಶ್ರೀ ವಂದಿಸಿದರು.