ಶಿರಸಿ: ನಗರದ ನಟರಾಜ ನೃತ್ಯ ಶಾಲೆಯ ಪಾಲಕರು ಹಾಗೂ ಅಭಿಮಾನಿ ವೃಂದ ಆಯೋಜಿಸಿದ್ದ ಭಾಗ್ವತ್ ಕಲಾಸಂಭ್ರಮ ಕಿಕ್ಕಿರಿದ ಅಭಿಮಾನಿಗಳ ನಡುವೆ ಸಂಭ್ರಮದಿಂದ ನಡೆಯಿತು.
ಇತ್ತೀಚೆಗೆ ಅಗಲಿದ ಮೋರ್ಚಿಂಗ್ ಹಾಗೂ ಮೃದಂಗ ವಾದಕ ಪ್ರದೀಪ ಭಾಗ್ವತ ಅವರ ಸ್ಮರಣಾರ್ಥ ಗಾನನೃತ್ಯ ನಮನ ಅಂಗವಾಗಿ ಇಲ್ಲಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಾನ ನಮನದಲ್ಲಿ ನಟರಾಜ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಶ್ರದ್ಧಾಭಕ್ತಿಯಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆದಿದ್ದು ಪುಟ್ಟಮಕ್ಕಳು ಸೇರಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಭಕ್ತಿಪ್ರಧಾನ ಹಾಡುಗಳನ್ನು ಹಾಡಿದರು.
ಮಕ್ಕಳ ಗಾನಕ್ಕೆ ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಪುರುಷೋತ್ತಮ ಹಾಗು ವಯೋಲಿನ್ನಲ್ಲಿ ಮೈಸೂರಿನ ಶ್ರೀಕಾಂತ ಸಾಥ್ ನೀಡಿದರು. ಪ್ರತಿಯೊಂದು ರಾಗ, ತಾಳ, ಲಯ ಕುರಿತು ನೃತ್ಯಗುರು ಸೀಮಾ ಭಾಗ್ವತ್ ವಿವರಿಸಿದರು.
ನಂತರ ನೃತ್ಯನಮನದಲ್ಲಿ ಖ್ಯಾತ ನೃತ್ಯಪಟು ವಿದ್ವಾನ್ ಸೂರ್ಯರಾವ್ ಅವರು ಏಕವ್ಯಕ್ತಿ ನೃತ್ಯದಲ್ಲಿ ರಾವಣ ಎಂಬ ಸುಂದರ ಕಥಾನಕವನ್ನು ಗತಕಾಲದ ವೈಭವ ಮರುಕಳಿಸಿದಂತೆ ಅಭಿನಯದ ಮೂಲಕ ಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.
ಸೂರ್ಯರಾವ್ ಅವರ ನೃತ್ಯ ಸಂದರ್ಭದಲ್ಲಿ ಹಿನ್ನೆಲೆಯ ಕೋರಿಯೋಗ್ರಫಿ ವ್ಯವಸ್ಥೆಯಲ್ಲಿ ಯೋನಿತಾ ಜೈನ್ ವಿಶೇಷ ನೃತ್ಯ ನಮನ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದರು.
ಭಾಗ್ವತ್ ಕಲಾಸಂಭ್ರಮ ಕಾರ್ಯಕ್ರಮವನ್ನು ಉದ್ಯಮಿ ವಿಷ್ಣುದಾಸ್ ಕಾಸರಕೋಡ ಉದ್ಘಾಟಿಸಿ ಮಾತನಾಡಿ, ನೃತ್ಯಕ್ಕೆ ಪುರಾಣ ಕಾಲದಿಂದಲೂ ಮಹತ್ವವಿದೆ. ಆರೋಗ್ಯಕ್ಕೆ ನೃತ್ಯಾಭ್ಯಾಸ ಹಾಗೂ ಯೋಗಾಭ್ಯಾಸ ಮಾಡುವುದು ಎರಡೂ ಒಂದೇ. ನೃತ್ಯಾಭ್ಯಾಸದಿಂದ ಮನುಷ್ಯನ ಆರೋಗ್ಯ ಸದಾ ಪರಿಪೂರ್ಣವಾಗಿರುತ್ತದೆ ಎಂದರು.
ಪಾಲಕ ವೃಂದದ ಪರವಾಗಿ ನುಡಿನಮನದಲ್ಲಿ ರಾಮು ಕಿಣಿ ಮಾತನಾಡಿ, ನೃತ್ಯ ಶಾಲೆಯ ಬೆನ್ನೆಲುಬಾಗಿದ್ದ ದಿವಂಗತ ಪ್ರದೀಪ ಭಾಗ್ವತ್ ಅವರ ಕಲಾಸಕ್ತಿ, ತುಡಿತ, ಶ್ರದ್ಧೆ ಹಾಗೂ ಅವರೊಂದಿಗಿನ ಒಡನಾಟ ಮತ್ತು ಕ್ರಿಯಾಶೀಲತೆ ನೆನಪು ಮಾಡಿಕೊಂಡರು.
ಈಶ್ವರೀಯ ವಿಶ್ವವಿದ್ಯಾಲಯದ ವೀಣಾಜಿ ಕಲಾವಿದರನ್ನು ಗೌರವಿಸಿ ಮಾತನಾಡಿದರು. ವಿದುಷಿ ಸೀಮಾ ಭಾಗ್ವತ್, ಕೊಳಲುವಾದಕ ದೀಪಕ ಹೆಬ್ಬಾರ್, ವಿದುಷಿ ದೀಪಾ ಭಾಗ್ವತ್, ಮಮತಾ ಹೆಗಡೆ, ಸುಶೀಲಾ ಜಾರ್ಜ್ ದಾನಂದಿ ಮುಂತಾದವರು ಇದ್ದರು.
ನಟರಾಜ ನೃತ್ಯಶಾಲೆಯ ವಿದ್ಯಾರ್ಥಿಗಳ ಭರತನಾಟ್ಯ ನಡೆಯಿತು. ಡಾ. ರಮೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಿಕ್ಷಕ ಉದಯ ಭಟ್ಟ ವಂದಿಸಿದರು.