ಚಿಕ್ಕೋಡಿ: ತಾಂತ್ರಿಕ ವಿದ್ಯಾಭ್ಯಾಸ ಹಾಗೂ ಉದ್ಯಮಕ್ಕೆ ಸಾಕಷ್ಟು ಅಂತರವಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಶ್ರಮಿಸಬೇಕು. ಪ್ರಾಯೋಗಿಕ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಕೊಡನೆಸ್ಟ್ ಕಂಪನಿಯ ಸಹಸಂಸ್ಥಾಪಕ ಪ್ರಭಾಕರನ್ ಜಿ. ಹೇಳಿದರು.
ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಅಲುಮ್ನಿ ಅಸೋಸಿಯೇಷನ್ ಸಹಯೋಗದಲ್ಲಿ ಈಚೆಗೆ ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಹಮ್ಮಿಕೊಂಡ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮಿಲನ- 2020ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಇಂಟರ್ನ್‌ಶಿಪ್ ಅನ್ನು ಶಿಕ್ಷಕರು ವರ್ಷಕ್ಕೊಮ್ಮೆ ಉದ್ಯಮದಲ್ಲಿ ಪಡೆದುಕೊಳ್ಳಲು ಕಾಲೇಜಿನ ಆಡಳಿತ ಮಂಡಳಿ ಅವಕಾಶ ನೀಡಬೇಕು ಎಂದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಕಂಪನಿಗೆ ವಹಿಸಿರುವ ಪ್ರಾಜೆಕ್ಟಗಳನ್ನು ಕಾಲೇಜಿನಲ್ಲಿರುವ ಪ್ರಸ್ತುತ ವಿದ್ಯಾರ್ಥಿಗಳಿಗೆ ನೀಡಿ ಅವುಗಳನ್ನು ಪರಿಹರಿಸಬೇಕು. ಯಾವುದೇ ಕಂಪನಿ ಆಯ್ಕೆಮಾಡುವ ಹಂತದಲ್ಲಿ ಕೇವಲ ಮನೋಭಾವ, ಮೂಲಜ್ಞಾನ ಮಾತ್ರ ಪರಿಶೀಲಿಸಲಾಗುವುದು. ವ್ಯಕ್ತಿ ತನ್ನ ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಸಾಧಿಸಬೇಕಾದರೆ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬೇರೆ ಬೇರೆಯಾಗಿಯೇ ಪರಿಗಣಿಸಬೇಕು ಎಂದರು.
ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಸಂಬಂಧವನ್ನು ಮತ್ತಷ್ಟು ಅನ್ಯೋನ್ಯಗೊಳಿಸಲು ಹಳೆಯ ವಿದ್ಯಾರ್ಥಿಗಳ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೇವೆ ಎಂದರು. ಹಳೆಯ ವಿದ್ಯಾರ್ಥಿಗಳು ಉದ್ಯಮದಲ್ಲಿರುವ ಆಧುನಿಕ ತಂತ್ರಜ್ಞಾನ ಹಾಗೂ ಕಾರ್ಯವೈಖರಿ ಕುರಿತು ಈಗಿನ ಮಕ್ಕಳಿಗೆ ಮಾಹಿತಿ ನೀಡಿ ಅವರಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಬೇಕು ಎಂದರು.
ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಸೋಸಿಯೇಷನ್ ಅಧ್ಯಕ್ಷ ಸಂದೀಪ ಶಿವರುದ್ರನವರ, ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವ್ಯವಸ್ಥಾಪಕ ಅನಿಲ ತೆಲೆಕ್, ಅಭಿಷೇಕ ಕುಂಬಾರ, ಸರಸ್ವತಿ ಹಿರೇಮಠ, ಮಹಮದ್ ಖಾಲಂದರ ಖಾನ, ಅಜಯ ಯಾಲವರ, ವಿನಯ ಕಟಗೇರಿ, ನಿತಿನ ಕಮತೆ ಭಾಗವಹಿಸಿದ್ದರು.
ವಿಭಾಗ ಮುಖ್ಯಸ್ಥರಾದ ಸತೀಶ ಭೋಜನ್ನವರ, ವೀರಭದ್ರ ಬೂದ್ಯಾಳ, ಬಸವರಾಜ ಚೌಕಿಮಠ, ಪ್ರದೀಪ ಹೊದ್ಲೂರ, ಡಾ. ರುದ್ರಗೌಡ ಪಾಟೀಲ, ಸಚಿನ ಮೆಕ್ಕಳಕಿ ಉಪಸ್ಥಿತರಿದ್ದರು. ಸಂಯೋಜಕ ವಿಜಯ ಹಾಲಪ್ಪನವರ ಸ್ವಾಗತಿಸಿದರು. ವಿದ್ಯಾಶ್ರೀ ಮುತ್ತೆಪ್ಪಗೋಳ ಮತ್ತು ಪ್ರನಾಲಿ ಕಿಂಡಾಲಕರ ನಿರೂಪಿಸಿದರು. ದೀಪಕ ಜುಂಜರವಾಡ ವಂದಿಸಿದರು.