ಗುಬ್ಬಿ : ತಾವು ವಾಸಿಸುತ್ತಿರುವ ಮನೆಗೆ ರಸ್ತೆ ಹಾಗೂ ಸ್ವಂತ ಮನೆ ಮಂಜೂರು ಮಾಡಿ ಕೊಡುವಂತೆ ನೂರಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸದೇ ಇದ್ದುವರಿಂದ ಕಸಬಾ ಹೋಬಳಿ ಹಳೇ ಗುಬ್ಬಿ ವಾಸಿ ಶ್ರೀನಿವಾಸ್ ವಿದ್ಯುತ್ ಹೈಟೆನ್ಷನ್ ಕಂಬ ಏರಿ ಪ್ರತಿಭಟಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಸಿತು.
ಹಳೇ ಗುಬ್ಬಿ ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಸಾಕಷ್ಟು ವ್ಯಕ್ತಿಗಳು ಮನೆ ಕಟ್ಟಿಕೊಂಡಿದ್ದು ತನಗೂ ಜಾಗ ಮಂಜೂರು ಮಾಡುವಂತೆ ಅಡಗೂರು ಗ್ರಾಪಂ ಪಿಡಿಒ ಹಾಗೂ ಸದಸ್ಯರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಶನಿವಾರ ಬೆಳಗ್ಗೆ 9.30ರಲ್ಲಿ ಪ್ರಭುವನಹಳ್ಳಿ ಗೇಟ್ ಬಳಿ ಹೈಟೆನ್ಷನ್ ವಿದ್ಯುತ್ ಕಂಬ ಏರಿ ನ್ಯಾಯಕ್ಕೆ ಪಟ್ಟು ಹಿಡಿದರು. ಯಾವ ಅಧಿಕಾರಿಗಳೂ ನನ್ನ ಸಮಸ್ಯೆಗೆ ಉತ್ತರ ನೀಡಿಲ್ಲ. ಅಡಗೂರು ಗ್ರಾಪಂ ಪಿಡಿಒ ಶಿವಾನಂದ್ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸರು ಹಾಗೂ ಗ್ರಾಮಸ್ಥರ ಎದುರು ಅಳಲು ತೋಡಿಕೊಂಡರು.
ಪಟ್ಟು ಹಿಡಿದ ಕುಳಿತ: ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರಾದರೂ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಕೆಳಗಿಳಿಯುವುದಿಲ್ಲವೆಂದು ಪಟ್ಟುಹಿಡಿದರು. 2 ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರು, ಪೊಲೀಸರು ಮನವಿ ಮಾಡಿದರೂ ಪ್ರತಿಭಟನೆ ಕೈಬಿಡುವಂತೆ ಕಾಣಲಿಲ್ಲ. ಕೊನೆಗೆ ತಹಸೀಲ್ದಾರ್‌ಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಬಿ.ಆರತಿ, ಮನೆ ಹಾಗೂ ರಸ್ತೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಕೆಳಗೆ ಬಂದು ಅಧಿಕಾರಿಗಳು ಕೊಟ್ಟ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡರು. ಆತನನ್ನು ಪಾರು ಮಾಡಲು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು ಎಂದು ಬೆಸ್ಕಾಂ ಎಇಇ ಅನಿಲ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದರು.
ನಾನೇನು ಪಾಕಿಸ್ತಾನದಿಂದ ಬಂದವನೇ? ನನಗೆ ಮಾತ್ರ ದುರುದ್ದೇಶದಿಂದ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಕಲ್ಪಿಸಲು ಅಡ್ಡಿಪಡಿಸಿದ್ದಾರೆ. ನನ್ನ ಎರಡೂ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ನಾನು ರಸ್ತೆಗಷ್ಟೇ ಅವಕಾಶ ಕೇಳಿದ್ದು. ಸರ್ಕಾರದ ಯಾವುದೇ ಸೌಲಭ್ಯ ಕೇಳಿಲ್ಲ. ಕೂಲಿ ಮಾಡಿ ನನ್ನ ಕುಟುಂಬ ಸಾಕುತ್ತೇನೆ. ಆದರೆ ಸೂರು ಕಲ್ಪಿಸಿಕೊಟ್ಟು ರಸ್ತೆಗೆ ಅವಕಾಶ ಮಾಡಿಕೊಡಿ. ಶ್ರೀನಿವಾಸ್ ಹಳೆಗುಬ್ಬಿ ವಾಸಿ ಕಾನೂನು ರೀತಿ ರಸ್ತೆ ನಿರ್ಮಿಸಿಕೊಡಲಾಗುವುದು. ಈ ರೀತಿ ದುಡುಕಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಕೆಲಸ ಮಾಡಬಾರದು. ಸರ್ಕಾರದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಬಿ.ಆರತಿ, ತಹಸೀಲ್ದಾರ್