ಜಿಲ್ಲೆ

ವಿಜ್ಞಾನ ಸಂಶೋಧನೆ ಜೀವನದ ಅವಿಭಾಜ್ಯ ಅಂಗ: ಡಾ. ಗುರುಮೂರ್ತಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶ, ಪರಿಸರ, ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು. ಮೂಲ ವಿಜ್ಞಾನದಲ್ಲಿ ಸಂಶೋಧನೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದರಿಂದ ಜೀವನ ಶೈಲಿ ಮೇಲ್ದರ್ಜೆಗೆ ಏರಿಸಲು ಸಾಧ್ಯವಿದೆ ಎಂದು ಬೆಂಗಳೂರು ಕ್ರೈಸ್ಟ್ ವಿವಿ ಸಿಎಆರ್‌ಡಿ ನಿರ್ದೇಶಕ ಡಾ. ಗುರುಮೂರ್ತಿ ಹೆಗ್ಡೆ ಹೇಳಿದರು.

ಗುರುವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ವಿಜ್ಞಾನಿ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತು ಸಂಶೋಧನೆಯಿಂದಾಗಿ ಮುಂದೆ ಸಾಗುತ್ತಿದೆ. ಕರೋನೋತ್ತರ ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದ್ದು, ನವೀನ ಅನ್ವೇಷಣೆಯಿಂದ ಕೊಡುಗೆ ನೀಡುತ್ತದೆ ಎಂಬುದಾಗಿ ಜಗತ್ತು ಭಾರತದ ಕಡೆಗೆ ನೋಡುತ್ತಿದೆ ಎಂದರು.

ಮಕ್ಕಳಲ್ಲಿ ಪ್ರಶ್ನಿಸುವ ಗುಣ ಅಗತ್ಯ
ಮಗುವಿನಲ್ಲಿ ಅನ್ವೇಷಣೆ ಮನೋಭಾವನೆ ಬಾಲ್ಯದಿಂದಲೇ ಇರುತ್ತದೆ. ಆಟಿಕೆ ನೀಡಿದರೆ ಮೊದಲು ಅದನ್ನು ಬಿಚ್ಚಿ ನೋಡುತ್ತದೆ. ಅಂದರೆ ಅದರೊಳಗೆ ಏನಿದೆ ಎಂಬ ಕುತೂಹಲ. ನಂತರದ ದಿನಗಳಲ್ಲಿ ಪ್ರತಿಯೊಂದನ್ನು ಪ್ರಶ್ನಿಸಲು ಪ್ರಾರಂಭಿಸುತ್ತದೆ. ಆದರೆ ಪೋಷಕರು ಪ್ರಶ್ನೆ ಕೇಳುವುದನ್ನೇ ನಿಲ್ಲಿಸುವ ರೀತಿಯಲ್ಲಿ ಬೆಳೆಸುತ್ತಾರೆೆ. ಈ ಮನೋಭಾವ ಬದಲಾಗಬೇಕು ಎಂದರು.

ಸ್ಯಾಮ್‌ಸಂಗ್ ಹುಟ್ಟಿದ್ದು ಹೀಗೆ
1995ರಲ್ಲಿ ನೂಡಲ್ ಕಂಪನಿಯ ಮಾಲೀಕರೊಬ್ಬರು ಹೊಸ ಬಗೆಯ ಟಿವಿಯನ್ನು ಅನ್ವೇಷಣೆ ಮಾಡಿದ ಫಲವಾಗಿ ಹುಟ್ಟಿದ ಕಂಪೆನಿ ಸ್ಯಾಮ್‌ಸಂಗ್. ಹೀಗಾಗಿ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಕುತೂಹಲ ಅಗತ್ಯ ಎಂದರು.

ಅಮೇರಿಕಾದ ಅಲಬಾಮ ವಿಶ್ವವಿದ್ಯಾನಿಲಯದ ಪೆಥೋಲಾಜಿ ಮತ್ತು ಕ್ಯಾನ್ಸರ್ ಸೆಂಟರ್ ಪ್ರಾಧ್ಯಾಪಕ ಡಾ. ಸೂರ್ಯನಾರಾಯಣ ವಾರಂಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಅಧ್ಯಯನ ನಡೆಸಿ ಉದ್ಯೋಗ ಮಾಡುವ ಬದಲು ಸಂಶೋಧನಾ ಕ್ಷೇತ್ರದತ್ತಲೂ ಆಸಕ್ತಿ ವಹಿಸಬೇಕು. ಬಯಾಲಾಜಿ, ರೆಡಿಯಾಲಜಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳಿಗೆ ಸಾಕಷ್ಟು ಅವಕಾಶಗಳಿವೆ. ಡಿಆರ್‌ಡಿಒ ಸಹಿತ ವಿವಿಧ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬಹುದು. ಸಂಶೋಧನಾ ಕ್ಷೇತ್ರದಲ್ಲಿ ಏಕತಾನತೆ ಇರುವುದಿಲ್ಲ. ಪ್ರತೀದಿನವೂ ಹೊಸ ಹೊಸ ವಿಚಾರಗಳನ್ನು ಅನ್ವೇಷಣೆ ಮಾಡಿ ಜನರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಲು ಸಾಧ್ಯವಿದೆ ಎಂದರು.

ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಹೆ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸ್ ನಿರ್ದೇಶಕ ಡಾ. ಪಿ. ಶ್ರೀಕುಮಾರ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಎ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪಿಪಿಸಿ ಆಡಳಿತಾಧಿಕಾರಿ ಡಾ.ಎ.ಪಿ. ಭಟ್, ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ್, ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಭಟ್, ಡಾ. ರಾಮು ಎಲ್. ಉಪಸ್ಥಿತರಿದ್ದರು.