ಜಿಲ್ಲೆ

ಆಹಾರ ಮೇಳದಲ್ಲಿ ವಿದ್ಯಾರ್ಥಿಗಳ ಭರ್ಜರಿ ವ್ಯಾಪಾರ

ಉಡುಪಿ: ಅಂಗಡಿ ಸಿಕ್ಕಿದ ಖುಷಿಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರಕ್ಕೆ ಸಜ್ಜುಗೊಂಡು ತಮ್ಮಲ್ಲಿರುವ ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಆಕರ್ಷಿಸಲು ನಾನಾ ಬಗೆಯ ಕಸರತ್ತು ನಡೆಸುತ್ತಾ ಸಾಯಂಕಾಲ ಮನೆಗೆ ಹೋಗುವ ಮುನ್ನ ಜೇಬು ತುಂಬಾ ಹಣ ಒಯ್ಯುವ ಉತ್ಸುಕತೆ ಎಲ್ಲರಲ್ಲೂ ಕಾಣುತ್ತಿತ್ತು. ನಾನಾ ಬಗೆಯ ತಿಂಡಿಗಳು, ಕರಕುಶಲ ವಸ್ತುಗಳು, ಐಸ್ಕ್ರೀಂ, ಜೂಸ್​ ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದರು. ಹೀಗೆ ಭರ್ಜರಿ ವ್ಯಾಪಾರದಲ್ಲಿ ತೊಡಗಿಸಿಕೊಂಡವರು ಫುಲ್ ಟೈಮ್​ ವರ್ತಕರಲ್ಲ. ಹದಿಹರೆಯದ ವಿದ್ಯಾರ್ಥಿಗಳು.

ಶುಕ್ರವಾರ ಪೂರ್ಣಪ್ರಜ್ಞಾ ಕಾಲೇಜಿನ ಆವರಣದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಮಕ್ಕಳಿಗೆ ವ್ಯಾಪಾರ, ವಹಿವಾಟಿನ ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ಮೇಳವನ್ನು ಆಯೋಜಿಸಲಾಗಿತ್ತು. 12 ಮಳಿಗೆಗಳಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳಗ್ಗೆ 11 ರಿಂದ ಸಾಯಂಕಾಲ 6.30ರವರೆಗೆ ವ್ಯಾಪಾರ ನಡೆಸಿದರು.

3 ಲಕ್ಷ ವಹಿವಾಟು
ಕ್ಯಾಂಪಸ್​ ನಲ್ಲಿ ಪಿಯುಸಿಯಿಂದ ಪದವಿವರೆಗೆ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷದ ಅಹಾರ ಮೇಳದಲ್ಲಿ 1.5 ಲಕ್ಷರೂ. ಮೊತ್ತದ ವ್ಯಾಪಾರ ನಡೆದಿತ್ತು. ಈ ವರ್ಷ 3 ಲಕ್ಷ ರೂ. ವಹಿವಾಟು ನಡೆಸಲಾಗಿದೆ. ಪ್ರತಿ ಮಳಿಗೆಗೆ 750 ರೂ. ಕಾಲೇಜಿಗೆ ಪಾವತಿಸಬೇಕಿದ್ದು, ಉಳಿದ ಲಾಭಾಂಶವನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಬಹುದಾಗಿದೆ. ಪ್ರತಿ ಆಹಾರ ಪದಾರ್ಥಕ್ಕೆ ದರ ಪಟ್ಟಿ ನಿಗದಿ ಮಾಡಲಾಗಿದ್ದು, ಸಾಯಂಕಾಲ ಮಳಿಗೆ ಮುಚ್ಚುವ ಮುನ್ನ ವಹಿವಾಟಿನ ವರದಿಯನ್ನು ಪ್ರಾಧ್ಯಾಪಕರಿಗೆ ಸಲ್ಲಿಸಬೇಕಿದೆ.

ಕಲಿಕೆಯೊಂದಿಗೆ ಗಳಿಕೆ ಎಂಬುದು ಸಂಧ್ಯಾ ಕಾಲೇಜಿನ ಧ್ಯೇಯ. ಹೀಗಾಗಿ ಮಕ್ಕಳಲ್ಲಿ ವ್ಯಾವಹಾರಿಕ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಸತತ 2ನೇ ವರ್ಷ ಆಹಾರ ಮೇಳ ಆಯೋಜಿಸಲಾಗಿದೆ. ಪಠ್ಯ ಅಭ್ಯಾಸದ ಜೊತೆಗೆ ಗ್ರಾಹಕರಿಗೆ ಹೇಗೆ ಸ್ಪಂದಿಸಬೇಕು. ಅವರ ಬೇಡಿಕೆಗಳೇನು ಎಂಬುದನ್ನು ತಿಳಿದುಕೊಳ್ಳಲು ಮೇಲ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಇದರಿಂದ ಲಭ್ಯವಾಗಲಿದೆ.ಡಾ. ಸುಕನ್ಯಾ ಮೇರಿಪ್ರಾಂಶುಪಾಲರು, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು.