ಜಿಲ್ಲೆ

ರಟ್ಟಿಹಳ್ಳಿಯಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಪಪಂ ಸಿಬ್ಬಂದಿ ಪ್ರತಿಭಟನೆ

ರಟ್ಟಿಹಳ್ಳಿ: ಗ್ರಾಪಂ ಅವಧಿಯಿಂದಲೂ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 26 ಸಿಬ್ಬಂದಿಯನ್ನು ಪೌರಸೇವಾ ವೃಂದದಲ್ಲಿ ವಿಲೀನಗೊಳಿಸಬೇಕು ಎಂದು ಸೇವೆ ಸ್ಥಗಿತಗೊಳಿಸಿ ಅಲ್ಲಿನ ಸಿಬ್ಬಂದಿ ಕೈಗೊಂಡಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳೀಯ ಕಂಪು ಬಳಗದ ಸಹಪಾಠಿಗಳು, ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘಟನೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸಿಬ್ಬಂದಿಯ ಬೇಡಿಕೆಯನ್ನು ಸರ್ಕಾರ ಶೀಘ್ರವೇ ಈಡೇರಿಸಬೇಕು ಎಂದು ಒತ್ತಾಯಿಸಿವೆ.

ಕಂಪು ಬಳಗ ಸಂಘದ ರಾಜು ವೇರ್ಣೆಕರ ಮಾತನಾಡಿ, ಕಳೆದ 20 ವರ್ಷಗಳಿಂದ ಪಟ್ಟಣದ ಸ್ವಚ್ಛತೆ, ಕುಡಿಯುವ ನೀರು, ಕಚೇರಿ ಕಾರ್ಯಗಳಿಗೆ ತೊಂದರೆಯಾಗದಂತೆ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ಸಿಬ್ಬಂದಿಗೆ ಯಾವುದೇ ಭದ್ರತೆ ಇಲ್ಲದ್ದರಿಂದ ಅವರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ಸಿಬ್ಬಂದಿಯ ಬೇಡಿಕೆಯಂತೆ ಎಲ್ಲ 26 ಸಿಬ್ಬಂದಿಯನ್ನು ಕೂಡಲೇ ಸರ್ಕಾರ ಜಿಲ್ಲಾಡಳಿತ ಪೌರಸೇವಾ ವೃಂದದಲ್ಲಿ ವಿಲೀನಗೊಳಿಸಬೇಕು ಇಲ್ಲವಾದರೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಟ್ಟಿಹಳ್ಳಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ಅಧ್ಯಕ್ಷ ನಾಗರಾಜ ನನ್ನೂರೆ ಹಾಗೂ ಸಿಬ್ಬಂದಿ ಮಂಜಪ್ಪ ಚಲವಾದಿ ಮಾತನಾಡಿ, ನಮ್ಮ ಬೇಡಿಕೆಗೆ ಜಿಲ್ಲಾಡಳಿತ ನಿಖರವಾದ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು. ಬುಧವಾರ ಬೆಳಗ್ಗೆ ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಆಗಮಿಸಲಿದ್ದಾರೆ. ಅವರಿಗೆ ನಮ್ಮ ಮನವಿ ಸಲ್ಲಿಸಲಾಗುವುದು ಬಳಿಕ ಪ್ರತಿಭಟನೆಯ ಕೈಬಿಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕಂಪು ಬಳಗದ ಸಿದ್ದಪ್ಪ ಜಾಧವ, ಗೋಪಾಲ ಮಡಿವಾಳರ, ಕೃಷ್ಣ ಬೊಂಗಾಳೆ, ಚೆನ್ನಬಸಪ್ಪ ಹೊಸಮನಿ, ಸತೀಶ ರಾಯ್ಕರ, ಭರಮಗೌಡ ಮುದಿಗೌಡರ, ಸಿದ್ದು ದ್ಯಾವಕ್ಕಳವರ ಇತರರು ಇದ್ದರು.

ಕುಡಿಯುವ ನೀರು- ಸ್ವಚ್ಛತೆ ಸಮಸ್ಯೆ

ಪ್ರತಿಭಟನೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನೀರಿನ ಟ್ಯಾಂಕರ್​ಗಳ ಮೊರೆ ಹೋಗಲಾಗುತ್ತಿದೆ. ಪಟ್ಟಣದಲ್ಲಿ ಮನೆಮನೆಗಳಿಗೆ ಬೆಳಗ್ಗೆ ಆಗಮಿಸುತ್ತಿದ್ದ ಕಸ ವಿಲೇವಾರಿ ವಾಹನಗಳ ಸಂಚಾರ ಬಂದ್ ಆಗಿದ್ದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು, ದುರ್ನಾತ ಬೀರುತ್ತಿದೆ. ಕೂಡಲೇ ಜಿಲ್ಲಾಡಳಿತ ಅಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.