ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸರ್ಕಾರಿ ಆಸ್ಪತ್ರೆಯ ಗೇಟ್ ಈಗಿನ ಡಾಂಬರುಗೊಂಡ ರಸ್ತೆಗೆ ತಾಗಿಕೊಂಡಿದೆ. ಇರುವ ರಸ್ತೆಯನ್ನು ಬದಲಾವಣೆ ಮಾಡುವುದು ಸರಿಯಲ್ಲ ಎಂದು ಸದಸ್ಯ ಅಬ್ದುಲ್ ರಹಿಮಾನ್ ಹೇಳಿದರು. ಸಾರ್ವಜನಿಕ ಅಭಿಪ್ರಾಯ ಕೇಳಿ ತೀರ್ಮಾನ ಮಾಡುವುದು ಉತ್ತಮ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಸಮಯ ರಸ್ತೆಗೆ ಸಮಸ್ಯೆಯಾಗದ ರೀತಿ ಈಗಲೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರುಣ್ ವಿಟ್ಲ ಅಭಿಪ್ರಾಯಪಟ್ಟರು. ಆಸ್ಪತ್ರೆಗೆ ಸಮಸ್ಯೆಯಾಗುವ ರೀತಿಯಲ್ಲಿ ರಸ್ತೆ ಬದಲಿಸುವ ಅಗತ್ಯವಿಲ್ಲ ಸದಸ್ಯ ಡೀಕಯ್ಯ ಸುರಳಿಮೊಲೆ ತಿಳಿಸಿದರು. ಸರ್ವ ಸದಸ್ಯರು ಸ್ಥಳ ಪರಿಶೀಲನೆಯನ್ನು ನಡೆಸಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ತಿಳಿಸಿದರು.
ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ವಿಚಾರದಲ್ಲಿ ಇನ್ನೂ ಸರಿಯಾದ ವ್ಯವಸ್ಥೆಯಾಗಿಲ್ಲ. ಪುತ್ತೂರು ವಿಟ್ಲ ರಸ್ತೆಯಲ್ಲಿ ಸಂಚಾರ ಸಮಸ್ಯೆ ಮಾತ್ರ ಸರಿಪಡಿಸುವ ಕಾರ್ಯವಾಗಿದೆ. ಸಾಲೆತ್ತೂರು ರಸ್ತೆ ಸೇರಿ ಉಳಿದ ಎರಡು ರಸ್ತೆಗಳ ಸಂಚಾರ ವ್ಯವಸ್ಥೆಯನ್ನು ಇನ್ನೂ ಸರಿಪಡಿಸಿಲ್ಲ. ಪಂಚಾಯಿತಿಯಿಂದ ತ್ವತರಿತವಾಗಿ ಫಲಕಗಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಬಾರ್ ಮುಂದೆ ಬಸ್ ನಿಲುಗಡೆಯಾಗುವುದು ಇನ್ನೂ ಸ್ಥಳಾಂತರಿಸಿಲ್ಲ. ತಕ್ಷಣ ಎಂಪೈರ್ ಮಾಲ್ ಮುಂಭಾಗಕ್ಕೆ ತರಿಸುವ ಕಾರ್ಯವಾಗಬೇಕು. ಯಾವುದೇ ವಿಚಾರದಲ್ಲಿ ಆದರೂ ಕೈಗೊಳ್ಳುವ ಪರಿಹಾರಗಳು ಶಾಶ್ವತವಾಗಿರಬೇಕು ಎಂದು ಸದಸ್ಯರು ಆಗ್ರಹಿಸಿದರು.
ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯೀ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಽಕಾರಿ ಕರುಣಾಕರ ವಿ. ಉಪಸ್ಥಿತರಿದ್ದರು.
ತಾಲೂಕು ಕೇಂದ್ರ ಅಗತ್ಯ
ನಾಗರಿಕರಿಂದ ಪಟ್ಟಣ ಪಂಚಾಯಿತಿಗೆ ವಿಟ್ಲವನ್ನು ತಾಲೂಕು ರಚನೆ ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಿರುವುದಕ್ಕೆ, ಇದು ಅತಿ ಅಗತ್ಯ ವಿಚಾರವಾಗಿದೆ ಎಂದು ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ತಾಲೂಕು ಆಗುವ ಸರ್ವ ವ್ಯವಸ್ಥೆಯನ್ನು ವಿಟ್ಲ ಹೊಂದಿದ್ದು, ಈಗಾಗಲೇ ಎರಡು ಬಾರಿ ನಿರ್ಣಯ ಮಾಡಲಾಗಿದೆ. ಮತ್ತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಕ್ಷೇತ್ರ ಪುನರ್ ವಿಂಗಡನೆ ಸಮಯ ವಿಟ್ಲ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಿದರು.