ಮುಂಡಗೋಡ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತಾವು ಹೇಳಿದ ಯಾವುದೇ ಕೆಲಸಗಳು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಸಭೆಯಿಂದ ಹೊರ ನಡೆದ ಘಟನೆ ಮಂಗಳವಾರ ನಡೆಯಿತು.
ಪಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಲಾದ ಯಾವುದೇ ಕೆಲಸಗಳು ಆಗುತ್ತಿಲ್ಲ. ಸದಸ್ಯರೇ ಹೇಳಿದರೂ ವಾರ್ಡ್‌ನಲ್ಲಿ ಕೆಲಸ ಆಗುವುದಿಲ್ಲವೆಂದರೆ ಹೇಗೆ ಎಂದು ಸಭೆ ಆರಂಭದಲ್ಲೇ ಸದಸ್ಯ ಫಣಿರಾಜ ಹದಳಗಿ ಅಧ್ಯಕ್ಷರನ್ನು ಪ್ರಶ್ನಿಸಿದರು. ಕೇವಲ ಸಭೆಗೆ ಬಂದು ತಮಗೆ ಬೇಕಾದ ಠರಾವು ಮಾಡಿಕೊಂಡು ಅಧಿಕಾರಿಗಳು ಹೋಗುತ್ತಾರೆ. ಹೀಗಾದರೆ ವಾರ್ಡಿನ ಜನರಿಗೆ ಏನು ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಜಿನಿಯರ್ ವಿರುದ್ಧ ಆಕ್ರೋಶ:
ಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಯದಿರುವುದಕ್ಕೆ ಇಂಜಿನಿಯರ್ ನಿರ್ಲಕ್ಷೃವೇ ಕಾರಣ ಎಂದು ಸದಸ್ಯರು ಆರೋಪಿಸಿದರು. ಸಂತೆ ಮಾರುಕಟ್ಟೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಂಜಿನಿಯರ್ ಮುಖ್ಯಾಧಿಕಾರಿಗಳತ್ತ, ಮುಖ್ಯಾಧಿಕಾರಿಗಳು ಇನ್ನೊಬ್ಬರತ್ತ ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡಿ ತೋರಿಸುವುದೇ ಅಗಿದೆ. ಅಧಿಕಾರಿಗಳು ತಮಗೆ ಬೇಕಾದ ಠರಾವು ಮಾಡಿಕೊಂಡು ಹೋಗುವುದೆ ಆಗಿದ್ದಲ್ಲಿ ಸಭೆ ನಡೆಸದಿರುವುದೇ ಉತ್ತಮ ಎಂದು ಫಣಿರಾಜ ಹದಳಗಿ, ಅಶೋಕ ಚಲವಾದಿ, ರಜಾ ಪಠಾಣ, ಶೇಖರ ಲಮಾಣಿ ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಹಾಗೂ ಕೆಲಸಗಳನ್ನು ಮಾಡಿದ ನಂತರವೇ ಮುಂದಿನ ಸಭೆ ಕರೆಯಿರಿ. ಆ ನಂತರ ಅನುಮೋದನೆ ಕೊಡವುದಾಗಿಅಶೋಕ ಚಲವಾದಿ ಹೇಳಿದಾಗ, ಸಹ ಸದಸ್ಯರು ಸಹಮತ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.
ಪ್ರತಿ ಸಭೆಯಲ್ಲಿ ಸರ್ಕಾರದಿಂದ ಬಂದಿರುವ ತುರ್ತು ಆದೇಶಗಳಿಗೆ ಅಧಿಕಾರಿಗಳು ಠರಾವು ಮಾಡಿಕೊಳ್ಳುತ್ತಾರೆ. ಆದರೆ, ಜನರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡದೆ ನಿರ್ಲಕ್ಷೃ ತೋರುತ್ತಿದ್ದಾರೆ. ಹೀಗಾಗಿ, ಎಲ್ಲ ಸದಸ್ಯರು ಸೇರಿ ಸಭೆ ಬಹಿಷ್ಕರಿಸಿದ್ದೇವೆ. ಜಯಸುಧಾ ಭೋವಿವಡ್ಡರ, ಪಪಂ ಅಧ್ಯಕ್ಷೆ ಪಟ್ಟಣ ಪಂಚಾಯಿತಿ ಸ್ಥಳೀಯ ಅನುದಾನ ಬಳಸಿ ಪಟ್ಟಣದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಂತೆ ಅಧ್ಯಕ್ಷರು ತಿಳಿಸಿದ್ದಾರೆ. ಕೂಡಲೇ ಸ್ಥಳೀಯ ಕೆಲಸಗಳನ್ನು ಆರಂಭಿಸುತ್ತೇವೆ. ಕುಮಾರ ನಾಯ್ಕ,ಮುಖ್ಯಾಧಿಕಾರಿ (ಪ್ರಭಾರ) ಪ.ಪಂ. ಮುಂಡಗೋಡ