ಜಿಲ್ಲೆ

ಪೌರ ಕಾರ್ಮಿಕರಿಗೆ ಶೀಘ್ರ ವಸತಿ ಕಲ್ಪಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ

Tumakuru

ತುಮಕೂರು : ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಸತಿ ರಹಿತ ಪೌರ ಕಾರ್ಮಿಕರಿಗೆ ಶೀಘ್ರ ವಸತಿ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನಿಷೇಧ, ನಿಯೋಜನೆ ಮತ್ತು ಪುನರ್ವಸತಿ ಅಧಿನಿಯಮ 2013ರ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಮಟ್ಟದ ವಿಜಿಲೆನ್ಸ್ ಕಮಿಟಿ ಸಭೆಯಲ್ಲಿ ಮಾತನಾಡಿದರು.

ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ ತ್ವರಿತವಾಗಿ ನಿವೇಶನ ಹಂಚಿ ಮನೆ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೌರಕಾರ್ಮಿಕರಿಗೆ ವಸತಿ ಹಂಚಿಕೆಗಾಗಿ ಗುರುತಿಸಿರುವ ಜಮೀನಿನನ್ನು ನಗರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸಗೊಳಿಸಿ ನೀರು, ರಸ್ತೆ ಚರಂಡಿ, ವಿದ್ಯುತ್ ಪೂರೈಕೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರಿಗಾಗಿ ಗುರುತಿಸಿರುವ ಜಮೀನಿನಲ್ಲಿ ನಿವೇಶನ ರಹಿತವಾಗಿ ವಾಸವಿರುವ ಅಲೆಮಾರಿ, ಹಂದಿ ಜೋಗಿ, ದೊಂಬಿದಾಸ, ಮತ್ತು ಸುಡುಗಾಡು ಸಿದ್ಧ ಜನಾಂಗದವರ ಕುಟುಂಬಗಳಿಗೆ ವಿಶೇಷ ವಸತಿ ಯೋಜನೆಯಡಿ ನಿವೇಶನ ಮತ್ತು ವಸತಿ ಸೌಲಭ್ಯ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಬೇಕು ಎಂದರು.

ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳ ವಿತರಣೆ ಮತ್ತು ಅವುಗಳ ಉಪಯೋಗ ಕುರಿತಂತೆ ಅರಿವು ಮೂಸಡಿಸುವುದರ ಜತೆಗೆ ಸಕಾಲಕ್ಕೆ ಸುರಕ್ಷತಾ ಪರಿಕರಗಳಾದ ಕೈಗವಸು, ಮಾಸ್ಕ್, ಗಮ್ ಬೂಟ್, ಸೇಪ್ಟಿ ಷೂ, ಸಮವಸ್ತ್ರಗಳನ್ನು ಸಕಾಲಕ್ಕೆ ವಿತರಿಸಬೇಕು ಎಂದರಲ್ಲದೆ, ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನೇರ ಪಾವತಿ ಪೌರ ಕಾರ್ಮಿಕರಿಗೆ ಪ್ರತಿ ಮಾಹೆಯ ವೇತನದಲ್ಲಿ ಕಟಾಯಿಸಲಾದ ಇಎಸ್‌ಐ ಮತ್ತು ಪಿಎಫ್ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದರು.

ಎಲ್ಲ ಪೌರಕಾರ್ಮಿಕರಿಗೆ ಶುಚಿ-ರುಚಿಯಾದ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ನೀಡಬೇಕು. ಮೊದಲು ಸಂಬಂಧಿಸಿದ ಅಧಿಕಾರಿಗಳು ಉಪಹಾರ ಸೇವಿಸಿದ ನಂತರ ಕಾರ್ಮಿಕರಿಗೆ ನೀಡುವ ಜತೆಗೆ ಕಾರ್ಮಿಕರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಶೌಚಗೃಹ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಪಾಲಿಕೆ, ಪಟ್ಟಣ ಪಂಚಾಯತಿ, ನಗರ, ಪುರ ಸಭೆಯ ಆವರಣದಲ್ಲಿ ವಿಶ್ರಾಂತಿ ಗೃಹ, ಸ್ನಾನ ಗೃಹ, ಕುಡಿಯುವ ನೀರು ಸೇರಿ ಶೌಚಗೃಹಗಳನ್ನು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಮಟ್ಟದ ವಿಜಿಲೆನ್ಸ್ ಸಮಿತಿ ಸದಸ್ಯ ಕದರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಯಲ್ಲೂರ್ಕರ್ ಮತ್ತಿತರರು ಇದ್ದರು.

ಪೌರಕಾರ್ಮಿಕರ ಸರ್ವೇ ಕಾರ್ಯ ಪ್ರಗತಿ : ಸ್ವಯಂ ಘೋಷಣೆ ಮಾಡಿದ ಪೌರಕಾರ್ಮಿಕರ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಮಟ್ಟದ ವಿಜಿಲೆನ್ಸ್ ಸಮಿತಿ ಸದಸ್ಯ ಡಾ.ಬಿ.ಕೆ.ಓಬಳೇಶ ಸಭೆಗೆ ಮಾಹಿತಿ ನೀಡಿದರಲ್ಲದೆ, ಪೌರಕಾರ್ಮಿಕರ ಅವಲಂಬಿತ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲ. ಅಧಿಕಾರಿಗಳು ಸರ್ಕಾರಿ ಯೋಜನೆಗಳ ಬಗ್ಗೆ ಪ್ರಚುರಪಡಿಸಿ ಪೌರಕಾರ್ಮಿಕರ ಅವಲಂಬಿತ ಕುಟುಂಬಗಳ ಆರ್ಥಿಕ ನೆರವನ್ನು ಒದಗಿಸಬೇಕು ಎಂದರು. ಅಕಾಲ ಮರಣಕ್ಕೆ ತುತ್ತಾದ ಪೌರಕಾರ್ಮಿಕರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವ ವ್ಯವಸ್ಥೆಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮೇಲ್ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದರು.