ಜಿಲ್ಲೆ

ಮೈಷುಗರ್ ಕಾರ್ಖಾನೆಗೆ ವಿದ್ಯುತ್ ಸರಬರಾಜು: ಇಂಧನ ಇಲಾಖೆಗೆ ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಬಾಕಿ ಹಣವನ್ನು ಹಂತ ಹಂತವಾಗಿ ಪಾವತಿಸಿಕೊಳ್ಳುವ ಸಂಬಂಧ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ದಿನೇಶ್ ಗೂಳಿಗೌಡ, ಮೈಷುಗರ್ ಕಾರ್ಖಾನೆಯಲ್ಲಿ ಈ ಬಾರಿ ಸುಮಾರು 5 ಲಕ್ಷ ಟನ್ ಕಬ್ಬನ್ನು ನುರಿಸುವ ಗುರಿಯನ್ನು ಹಾಕಿಕೊಂಡಿದೆ. ಈಗ ಎದುರಾಗಿರುವ ಸಮಸ್ಯೆಯೆಂದರೆ ಈ ಹಿಂದಿನಿಂದಲೂ ನಷ್ಟದಲ್ಲಿದ್ದ ಕಂಪನಿಗೆ ವಿದ್ಯುತ್ ಬಿಲ್ ಅನ್ನು ಕಟ್ಟಲು ಸಾಧ್ಯವಾಗಿಲ್ಲ. 40.86 ಕೋಟಿ ರೂಪಾಯಿಗಳ ವಿದ್ಯುತ್ ಬಾಕಿ ಮೊತ್ತವಿದ್ದು, ಇದನ್ನು ಹಂತ ಹಂತವಾಗಿ ಪಾವತಿ ಮಾಡಲು ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಅಗತ್ಯ ವಿದ್ಯುತ್ ಸರಬರಾಜು ಮಾಡಲು ಸೆಸ್ಕ್‌ನವರಿಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರಿಗೆ ಕರೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾರ್ಖಾನೆಗೆ ವಿದ್ಯುತ್ ಸರಬರಾಜು ಮಾಡುವ ಸಂಬಂಧ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ನಲ್ಲಿ ಜು.1ರಿಂದ ಶುಲ್ಕ ಸಂಗ್ರಹಿಸುವ ಸಂಬಂಧ ಎಂಎಲ್‌ಸಿ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ ಹಾಗೂ ರಮೇಶ ಬಂಡಿಸಿದ್ದೇಗೌಡ ಚರ್ಚೆ ನಡೆಸಿದರು. ಕೆಲಸ ಪೂರ್ಣಗೊಳಿಸದೇ ಶುಲ್ಕ ಸಂಗ್ರಹಿಸುವ ನಿರ್ಧಾರ ಸರಿಯಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಹೊರೆಯಾಗಲಿದೆ. ಆದ್ದರಿಂದ ಈ ಬಗ್ಗೆ ತುರ್ತು ಕ್ರಮ ವಹಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಕರೆ ಮಾಡಿ ಟೋಲ್ ಶುಲ್ಕ ವಿಧಿಸಿರುವ ಸಂಬಂಧ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.