ಉಪ್ಪಿನಬೆಟಗೇರಿ: ಹೊಲದ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ತಾಸು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಕಬ್ಬೇನೂರು ಹಾಗೂ ಕಲ್ಲೆ ಗ್ರಾಮದ ರೈತರು ಇಲ್ಲಿನ 33 ಕೆವಿ ವಿದ್ಯುತ್ ಗ್ರಿಡ್‌ಗೆ ಮುತ್ತಿಗೆ ಹಾಕಿ, ಎಲ್ಲ ಗ್ರಾಮಗಳ ವಿದ್ಯುತ್ ಸಂಪರ್ಕವನ್ನು ಬಂದ್ ಮಾಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಹೆಸ್ಕಾಂ ಇಇ ಎಂ. ದೊಡಮನಿ, ಎಇಇ ಹೊನ್ನೂರಪ್ಪ, ಸ್ಟೇಶನ್ ಎಇಇ ಗುಳಸಂದ್ರ ಆಗಮಿಸಿದ್ದರು. ಉಪ್ಪಿನಬೆಟಗೇರಿ ಗ್ರಾಮಕ್ಕೆ ವಿದ್ಯುತ್ ಕಡಿತಗೊಂಡಿದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮಸೂತಿ ಮತ್ತು ಗ್ರಾಪಂ ಸದಸ್ಯರೂ ಬಂದಿದ್ದರು. ಮೊದಲು ಉಪ್ಪಿನಬೆಟಗೇರಿಗೆ ವಿದ್ಯುತ್ ಸಂಪರ್ಕ ಆರಂಭಿಸುವಂತೆ ಮನವಿ ಗ್ರಾಮಸ್ಥರು ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಮಲ್ಲಣ್ಣ ಅಷ್ಟಗಿ ಉಪ್ಪಿನಬೆಟಗೇರಿ ಕಮರ್ಷಿಯಲ್ ಏರಿಯಾ ಇದ್ದು, ಮೊದಲು ವಿದ್ಯುತ್ ಸಂಪರ್ಕ ಕೊಡಿ. ನಂತರ ಸಮಸ್ಯೆಯನ್ನು ಇತ್ಯರ್ಥಗೊಳಿಸೋಣ ಎಂದರು. ಆಗ ಆಕ್ರೋಶಗೊಂಡ ಕಬ್ಬೇನೂರು ಹಾಗೂ ಕಲ್ಲೆ ಗ್ರಾಮದ ರೈತರು, ನಿಮ್ಮದು ಕಮರ್ಷಿಯಲ್ ಏರಿಯಾ, ನಾವು ರೈತರು ನಾವು ದುಡಿದು ತಿನ್ನುವವರು. ನಮಗೆ ನಿಮ್ಮ ವಿದ್ಯುತ್ ಸಂಪರ್ಕವೇ ಬೇಡ ಎಂದು ಕಚೇರಿಯಿಂದ ಹೊರ ಹೋಗಲು ಮುಂದಾದರು. ಆಗ ಅವರನ್ನು ವಾಪಸ್ ಕರೆತರಲು ತಳ್ಳಾಟ, ನೂಕಾಟ ನಡೆಯಿತು. ಪೊಲೀಸರು ಸ್ಥಳದಲ್ಲೇ ಇದ್ದರೂ ನಿಯಂತ್ರಿಸಲಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮಸೂತಿ ಮಧ್ಯೆ ಪ್ರವೇಶಿಸಿ ಎರಡೂ ಗ್ರಾಮಸ್ಥರ ಮನವೊಲಿಸಿದರು.
ಒಂದು ವಾರ ಹಗಲು ಏಳು ತಾಸು ಒಂದು ವಾರ ರಾತ್ರಿ ಏಳು ತಾಸು ವಿದ್ಯುತ್ ಪೂರೈಕೆ ಮಾಡಲು ಎಇಇ ಒಪ್ಪಿದರು. ಕಲ್ಲೆ, ಕಬ್ಬೇನೂರು ರೈತರ ಪಂಪ್‌ಸೆಟ್‌ಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಸುವಂತೆ ಸ್ಥಳದಲ್ಲಿದ್ದ ಸ್ಥಳೀಯ ಹೆಸ್ಕಾಂ ಉಪ ವಿಭಾಗಾಧಿಕಾರಿ ಯಮುನಾಕ್ಷಿ ಕಟ್ಟಿಮನಿ ಅವರಿಗೆ ಇಇ ಎಂ. ದೊಡಮನಿ ತಿಳಿಸಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ಶಂಕ್ರಪ್ಪ ಹಸಬಿ, ಉಮೇಶ ಕೆಂಗಾನೂರ, ಬಸನಗೌಡ ಮುದಿಗೌಡ್ರ, ರಾಮನಗೌಡ ಕಳಸಣ್ಣವರ, ಶಂಕರಗೌಡ ಬೂಮನಗೌಡ್ರ, ಆನಂದಗೌಡ ತಡಕೋಡ, ಶೇಖನಗೌಡ ಬೂಮನಗೌಡ್ರ, ಬಸವರಾಜ ಮರಲಿಂಗನವರ, ಗಂಗಪ್ಪ ತಳವಾರ, ಮಲ್ಲಪ್ಪ ವಗೆಣ್ಣವರ ಸೇರಿದಂತೆ ಉಪ್ಪಿನಬೆಟಗೇರಿ, ಕಬ್ಬೆನೂರ, ಕಲ್ಲೂರ, ಕಲ್ಲೇ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.