ಬಂಟ್ವಾಳ: ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ-ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ವಿದ್ಯುತ್ ಕಂಬವೊಂದು ಉರುಳಿಬಿದ್ದಿದೆ.
ಈ ಘಟನೆಯಿಂದ ಪ್ರಾಣಹಾನಿ ಆಗಿಲ್ಲ. ಆದರೆ ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು. ಈಗಾಗಲೇ ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂದರ್ಭ ಸವಾರರಿಗೆ ಚಾಲಕರಿಗೆ ಗೊಂದಲಗಳು ಉಂಟಾಗುತ್ತಿದ್ದು, ರಾತ್ರಿ ವೇಳೆ ಘಟನೆ ನಡೆದಾಗ ಟ್ರಾಫಿಕ್ ಜಾಮ್ ಉಂಟಾಯಿತು.
ಕಂಬ ಉರುಳಿ ಬಿದ್ದ ಬಳಿಕ ಬಿ.ಸಿ.ರೋಡ್ ಪರಿಸರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರು ತೊಂದರೆ ಪಡುವಂತಾಯಿತು. ಬುಧವಾರ ಹೊಸ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಅಳವಡಿಸುವ ಕಾರ್ಯ ನಡೆಸಲಾಗಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಒಟ್ಟು 36 ಕಂಬಗಳು ಉರುಳಿ ಬಿದ್ದಿದೆ ಎಂದು ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ವಿಜಯವಾಣಿಗೆ ತಿಳಿಸಿದ್ದಾರೆ.
ಬಿ.ಸಿ.ರೋಡ್‌ನಲ್ಲಿರುವ ಬಂಟ್ವಾಳ ಪೊಲೀಸ್ ಉಪವಿಭಾಗದ ಕಚೇರಿಯ ಹೆಂಚಿನ ಛಾವಣಿಯ ಮೇಲೆ ತೆಂಗಿನಮರ ಬಿದ್ದು ಹಾನಿಯುಂಟಾಗಿದೆ. ಡಿವೈಎಸ್ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕಚೇರಿಯ ಮೇಲ್ಭಾಗಕ್ಕೆ, ಅಂಗಣದ ಮುಂಭಾಗದಲ್ಲಿದ್ದ ತೆಂಗಿನಮರ ಬಿದ್ದು ಹೆಂಚು ಪುಡಿಯಾಗಿ ಛಾವಣಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಡಿವೈಎಸ್ಪಿ ಕಚೇರಿಯೊಳಗೆ ಇಲ್ಲದೆ ಇದ್ದುದರಿಂದ ಅಪಾಯ ತಪ್ಪಿದೆ. ಬಿ.ಸಿ.ರೋಡಿನ ಹಳೆಯ ಹೆಂಚಿನ ಛಾವಣಿಯ ಪೊಲೀಸ್ ಠಾಣೆಯನ್ನೇ ನವೀಕರಣಗೊಳಿಸಿ ಡಿವೈಎಸ್ಪಿ ಕಚೇರಿಯಾಗಿ ಬದಲಿಸಲಾಗಿತ್ತು. ಇದೀಗ ಕಚೇರಿಯ ದುರಸ್ತಿ ಕಾರ್ಯ ನಡೆಯುತ್ತಿದೆ.