* ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ
* ಸಮಸ್ಯೆ ಸರಿಪಡಿಸಿ ಚಾಲನೆಗೆ ಮುಂದಾದ ರಾಮನಗರ ನಗರಸಭೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಉದ್ಘಾಟನೆ ಕಂಡರೂ ಬಹು ದಿನಗಳಿಂದ ಚಾಲನೆ ಕಾಣದೆ ನನೆಗುದಿಗೆ ಬಿದ್ದಿದ್ದ ಹಿಂದು ರುದ್ರಭೂಮಿಯ ಆಧುನಿಕ ವಿದ್ಯುತ್ ಚಿತಾಗಾರ ಚಾಲನೆಗೆ ನಗರಸಭೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಬಹುದಿನಗಳ ಬೇಡಿಕೆಗೆ ಶೀಘ್ರ ಈಡೇರಲಿದೆ.
ರಾಮನಗರದ ಬೆಂಗಳೂರು- ಮೈಸೂರು ರಸ್ತೆ ಎಪಿಎಂಸಿ ಮುಂಭಾಗದ ಹಿಂದು ರುದ್ರಭೂಮಿಯಲ್ಲಿ ಆಧುನಿಕ ವಿದ್ಯುತ್ ಚಿತಾಗಾರ ಆರು ವರ್ಷಗಳ ಹಿಂದೆಯೇ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದರೂ ಚಾಲನೆ ಮಾತ್ರ ಸಿಕ್ಕಿರಲಿಲ್ಲ. ಚಿತಾಗಾರದ ಎಲೆಕ್ಟ್ರಿಕ್ ಪರಿಕರಗಳು ವಿದ್ಯುತ್ ವೈರ್‌ಗಳು ಹಾನಿಯಾಗಿ ಉಪಯೋಗಕ್ಕೆ ಇಲ್ಲದಂತಾಗಿದ್ದವು. ಈಗ, ನಗರಸಭೆ ನಿರ್ವಹಣೆದಾರರ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸಿ ಚಿತಾಗಾರದಲ್ಲಿದ್ದ ಸಮಸ್ಯೆ ಸರಿಪಡಿಸಿ ಚಾಲನೆಗೆ ಅಣಿಯಾಗಿದೆ.
2016-17ನೇ ಸಾಲಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು 2019-20ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರದ ಆಗಿನ ಸಂಸದ ಡಿ.ಕೆ. ಸುರೇಶ್ ಅವರ ಲೋಕಸಭಾ ಕ್ಷೇತ್ರದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣವಾಗಿತ್ತು. ಆದರೆ, ಉದ್ಘಾಟನೆ ಕಂಡಿಲ್ಲ ಎಂಬ ಜನರ ಒತ್ತಾಯದ ಹಿನ್ನೆಲೆಯಲ್ಲಿ ಆಗಿನ ಸಂಸದ ಡಿ.ಕೆ. ಸುರೇಶ್ ವಿದ್ಯುತ್ ಚಿತಾಗಾರ ಉದ್ಘಾಟಿಸಿದ್ದರು. ಆದರೆ, ಸೇವೆ ಮಾತ್ರ ಇದುವರೆವಿಗೂ ಸಿಕ್ಕಿರಲಿಲ್ಲ.
ಒಂದು ಶವದ ಅಂತ್ಯ ಸಂಸ್ಕಾರಕ್ಕೆ ಸುಮಾರು 1 ಟನ್ ಸೌದೆ ಬೇಕಾಗುತ್ತದೆ. ಇದರಿಂದ ಜನರು ಸೌದೆ ಹೊಂದಿಸಿ ತರಲು ಆರ್ಥಿಕವಾಗಿ ಸಮಸ್ಯೆ ಎದುರಿಸಬೇಕಿತ್ತು. ವಿದ್ಯುತ್ ಚಿತಾಗಾರದಲ್ಲಿ ಒಂದಷ್ಟು ಕಡಿಮೆ ಖರ್ಚಿನಲ್ಲಿ ಅಂತ್ಯಕ್ರಿಯೆ ನಡೆಸಬಹುದು ಎಂಬುದು ಜನರ ಅಭಿಪ್ರಾಯ. ವಿದ್ಯುತ್ ಚಿತಾಗಾರವಿದ್ದರೆ ಭೂಮಿಯಲ್ಲಿ ಹೂಳುವ ಮತ್ತು ಸೌದೆಯಲ್ಲಿ ಸುಡುವ ಜಾಗದ ಕೊರತೆ ತಪ್ಪುತ್ತದೆ. ಮಳೆಗಾಲದಲ್ಲಿ ಯಾವುದೇ ತೊಂದರೆ ಇಲ್ಲದೆ ಅಂತ್ಯಕ್ರಿಯೆ ನೆರವೇರಿಸಬಹುದು ಎನ್ನುತ್ತಾರೆ ಬಾಲಗೇರಿಯ ಮುರುಗೇಶ್.
ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ಮೂಲ ಸೌಕರ್ಯ ನೀಡುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ನಗರಸಭೆ ಕಾರ್ಯೋನ್ಮುಖವಾಗಿದೆ. ಶೀಘ್ರದಲ್ಲೇ ರುದ್ರಭೂಮಿಯಲ್ಲಿರುವ ವಿದ್ಯುತ್ ಚಿತಾಗಾರ ಕಾರ್ಯಾರಂಭ ಮಾಡಲಿದ್ದು, ನಗರಸಭೆ ಅಗತ್ಯ ಸಿಧ್ಧತೆ ಕೈಗೊಂಡಿದೆ. ಕೆ. ಶೇಷಾದ್ರಿ ಅಧ್ಯಕ್ಷರು, ನಗರಸಭೆ, ರಾಮನಗರವಿದ್ಯುತ್ ಚಿತಾಗಾರ ಚಾಲನೆಗೆ ಕ್ರಮ ಕೈಗೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸೇವೆ ನೀಡಲು ಕಟ್ಟಬೇಕಿರುವ ಶುಲ್ಕ ಸಮಯ, ಸೇವೆ ಬಗ್ಗೆ ಮಾಹಿತಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ನಗರಸಭೆ ಶೀಘ್ರವೇ ಹೊರಡಿಸಲಿದೆ. ಡಾ. ಜಯಣ್ಣಆಯುಕ್ತರು, ನಗರಸಭೆ, ರಾಮನಗರ.ವಿದ್ಯುತ್ ಚಿತಾಗಾರ ಚಾಲನೆ ಆಗಬೇಕು. ಈಗಾಗಲೇ ವೀರಶೈವ, ಬ್ರಾಹ್ಮಣ, ಹಿಂದು ರುದ್ರಭೂಮಿಯಲ್ಲಿನ ಸಂಪರ್ಕ ರಸ್ತೆಗಳಿಗೆ ಸಿಮೆಂಟ್ ರಸ್ತೆ ಮಾಡಲಾಗಿದೆ. ಕಳೆದ ಭಾರಿ ಉದ್ಘಾಟನೆ ಕಂಡರೂ ಚಾಲನೆ ಆಗಿಲ್ಲ. ಈಗ ನಗರಸಭೆ ಚಾಲನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.ಮಾವಿನಸಸಿ ವೆಂಕಟೇಶ್8ನೇ ವಾರ್ಡ್ ನಿವಾಸಿ