ಚನ್ನರಾಯಪಟ್ಟಣ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಅಶಕ್ತರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಮಂಗಳವಾರ ಪಟ್ಟಣದ ಕೆರೆ ಬೀದಿಯಲ್ಲಿರುವ ವಾತ್ಸಲ್ಯ ಸದಸ್ಯೆ ನಾಗಮ್ಮ ಅವರಿಗೆ ವಾತ್ಸಲ್ಯ ಯೋಜನೆ ಅಡಿ ನೂತನವಾಗಿ ನಿರ್ಮಿಸಿರುವ ವಾತ್ಸಲ್ಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಕಲ್ಪನೆಯೊಂದಿಗೆ ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆ ಇಂದು ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ನೆರಳಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಿದೆ.
ಹಲವಾರು ಕಾರ್ಯಕ್ರಮಗಳು ಇಂದು ಬಡವರ ಕಣ್ಣೀರನ್ನು ಒರೆಸುತ್ತಿವೆ. ಅತ್ಯಂತ ಪಾರದರ್ಶಕವಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರಿನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬ ಗುಡಿಸಲಿನಲ್ಲಿ ಭಯದಿಂದ ಬದುಕುವುದನ್ನು ಮನಗಂಡ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಅವರು ವಾತ್ಸಲ್ಯ ಸದಸ್ಯರನ್ನು ಗುರುತಿಸಿ ಅವರಿಗೆ ಮಾತೃ ವಾತ್ಸಲ್ಯ ಕೊಡುವ ಮೂಲಕ ಪ್ರತಿ ತಿಂಗಳು ಮಾಸಾಶನ, ವಾತ್ಸಲ್ಯ ಮಿಕ್ಸ್ ಫುಡ್, ವಾತ್ಸಲ್ಯ ಕಿಟ್‌ಗಳನ್ನು ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಉಮೇಶ್ ಸಿ.ಎನ್.ಅಶೋಕ್ ಪುರಸಭಾ ಮಾಜಿ ಸದಸ್ಯ ಸುಧಾ ಚಿಕ್ಕಣ್ಣ ಸ್ತ್ರಿರೋಗ ತಜ್ಞ ಡಾ.ರಮೇಶ್ ಬಾಬು, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಕ್ಷೇತ್ರ ಯೋಜನಾಧಿಕಾರಿ ಕೆ. ಪ್ರಸಾದ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಸೌಮ್ಯಾ, ಮೇಲ್ವಿಚಾರಕಿ ಶಿಬಾ ಇತರರು ಇದ್ದರು.