RTPS 
ಜಿಲ್ಲೆ

ಧಾರಾಕಾರ ಮಳೆಗೆ ಬೆಚ್ಚಿದ ವಿದ್ಯುತ್ ಬೇಡಿಕೆ ಎಂಟು ಥರ್ಮಲ್ ಘಟಕಗಳಿಗೆ ವಿಶ್ರಾಂತಿ, ಸೌರ-ಪವನ- ಜಲವಿದ್ಯುತ್ ಹೇರಳ

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ರಾಜ್ಯದ ನಾನಾ ಕಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿದ್ಯುತ್ ಬೇಡಿಕೆ ತೀವ್ರ ಕುಸಿತ ಕಂಡಿದೆ. ಪರಿಣಾಮ ಕಳೆದ ಹತ್ತು ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ರಾಯಚೂರಿನ ಥರ್ಮಲ್ ವಿದ್ಯುತ್ ಕೇಂದ್ರದ ಎಲ್ಲ 8 ಘಟಕಗಳಿಗೆ ಕೆಪಿಸಿ ಸಂಪೂರ್ಣ ವಿಶ್ರಾಂತಿ ನೀಡಿದೆ.

ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಉತ್ಪಾದಿಸಿದ್ದ ಥರ್ಮಲ್ ಘಟಕಗಳಿಗೆ ಈಗ ವಿಶ್ರಾಂತಿಯ ಕಾಲ. ಅದರಲ್ಲೂ ಮೊಟ್ಟ ಮೊದಲ ಬಾರಿಗೆ ಶಕ್ತಿನಗರದಲ್ಲಿರುವ ಘಟಕಗಳನ್ನು ಸಂಪೂರ್ಣ ಸ್ಥಗಿತಗೊಳಿಸಿರುವುದು ನಿರ್ವಹಣೆಗೆ ಪೂರಕ ಪರಿಸರ ನಿರ್ಮಾಣವಾಗಿದೆ.

ಧಾರಾಕಾರ ಮಳೆ-

ರಾಜ್ಯದ ದಕ್ಷಿಣ ಭಾಗ ಹಾಗೂ ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಅದರಿಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ ವಾತಾವರಣದಲ್ಲಿ ತಂಪು ಮೂಡಿದೆ. ಅಷ್ಟೇ ಅಲ್ಲ ಜಲ ವಿದ್ಯುತ್ ಘಟಕಗಳಿಗೆ ಹೇರಳ ನೀರು ಲಭ್ಯವಾಗುತ್ತಿದೆ. ಬೇಸಿಗೆಯಲ್ಲಿ ಬಳಕೆಯಾಗುತ್ತಿದ್ದ ವಿದ್ಯುತ್‌ನ ಪ್ರಮಾಣ ತೀವ್ರ ಕುಸಿತ ಕಂಡಿದೆ.

ಬೇಡಿಕೆ ಇಳಿಕೆ-

ರಾಜ್ಯದಲ್ಲಿ ಕಳೆದ ಬೇಸಿಗೆಯಲ್ಲಿ ದಾಖಲೆಯ ವಿದ್ಯುತ್ ಬೇಡಿಕೆ ದಾಖಲಾಗಿತ್ತು. 18 ಸಾವಿರ ಮೆ.ವಾ ವರೆಗೆ ಬೇಡಿಕೆ ಏರಿಕೆಯಾಗಿತ್ತು. ಆಗ ಬೇಡಿಕೆ ಈಡೇರಿಸುವಷ್ಟು ವಿದ್ಯುತ್ ಥರ್ಮಲ್ ಘಟಕ ಹಾಗೂ ವಿದ್ಯುತ್ ಖರೀದಿ ಮೂಲಕ ಪರಿಸ್ಥಿರಿ ಸರಿದೂಗಿಸಿದ್ದ ಕರ್ನಾಟಕ ವಿದ್ಯುತ್ ನಿಗಮಕ್ಕೆ ಈಗ ಮಳೆರಾಯ ನೆಮ್ಮದಿ ಕರುಣಿಸಿದ್ದು ಭರಪೂರ ಮಳೆಯ ಕಾರಣಕ್ಕೆ ಬೇಡಿಕೆ 12 ರಿಂದ 13 ಸಾವಿರಕ್ಕೆ ತಗ್ಗಿದೆ. ಥರ್ಮಲ್ನ ಅಗತ್ಯತೆಯಿಲ್ಲದಷ್ಟು ಇನ್ನುಳಿದ ಇಂಧನದ ಮೂಲಗಳಿಂದ ಹೇರಳ ವಿದ್ಯುತ್ ಸಿಗುತ್ತಿದೆ.

ವಿದ್ಯುತ್ ಹೇರಳ-

ರಾಜ್ಯದಲ್ಲಿ ಸದ್ಯ ಎಲ್ಲ ಮೂಲಗಳಿಂದ ದಿನವೂ 10 ರಿಂದ 12 ಸಾವಿರ ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಯೇ 8ಸಾವಿರ ಮೆವಾ ವರೆಗೆ ಹೆಚ್ಚಳ ಕಂಡಿದೆ. ಜಲ ವಿದ್ಯುತ್ ಘಟಕಗಳಲ್ಲಿ 2 ಸಾವಿರ ಮೆವಾ ವಿದ್ಯುತ್ ಲಭ್ಯವಾಗುತ್ತಿದೆ. ಬೇಡಿಕೆಯ ವಿದ್ಯುತದ ಸರಾಗವಾಗಿ ಸಿಗುತ್ತಿರುವುದರಿಂದ ಶಕ್ತಿನಗರದ ಎಂಟು ಘಟಕಗಳಿಗೆ ವಿಶ್ರಾಂತಿ ನೀಡಲಾಗಿದೆ.

ಹತ್ತು ವರ್ಷದಲ್ಲೇ ಫಸ್ಟ್-

ರಾಜ್ಯದಲ್ಲಿ ಕಳೆದ ಮೂರು ವರ್ಷ ಮಳೆಯ ಅಭಾವದಿಂದ ವಿದ್ಯುತ್ ಬಳಕೆ ಹೆಚ್ಚಿತ್ತು. ಉತ್ಪಾದನೆ ಅನಿವಾರ್ಯ ಆಗಿತ್ತು. ಈ ವರ್ಷ ಮುಂಗಾರು ಆರಂಭದಲ್ಲೇ ಹೇರಳ ಮಳೆಯಾಗಿದ್ದು ವಿದ್ಯುತ್ ಉತ್ಪಾದನೆ ಸರಳವಾಗಿದೆ. ಹೀಗಾಗಿ ಕಳೆದ ಹತ್ತು ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಶಕ್ತಿನಗರದ ಎಲ್ಲ ಎಂಟು ಘಟಕಗಳಲ್ಲಿ ಉತ್ಪಾದನೆಯ ಅವಶ್ಯಕತೆಯಿಲ್ಲದಂತಾಗಿದೆ. ಇದರಿಂದ ಘಟಕಗಳ ನಿರ್ವಹಣೆಗೆ ಅನುಕೂಲಕರ ಪರಿಸರ ನಿರ್ಮಾಣವಾಗಿದೆ.

ರಾಜ್ಯದ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜಲ ವಿದ್ಯುತ್ ಘಟಕಗಳಿಗೆ ಹೇರಳ ನೀರು ಲಭ್ಯವಾಗುತ್ತಿರುವುದರಿಂದ ಥರ್ಮಲ್ ವಿದ್ಯುತ್ ಘಟಕಗಳಿಗೆ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಕಳೆದ ಹತ್ತು ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ರಾಯಚೂರಿನ ಥರ್ಮಲ್ ವಿದ್ಯುತ್ ಕೇಂದ್ರದ 8 ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ.

ಜಯಪ್ರಕಾಶ ಇಡಿ ಆರ್‌ಟಿಪಿಎಸ್ ರಾಯಚೂರು