ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೆ ಅನಧಿಕೃತವಾಗಿ ರಾಜಕಾಲುವೆಗೆ ತ್ಯಾಜ್ಯ ನೀರನ್ನು ಹರಿಬಿಡುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬಿಬಿಎಂಪಿ ಹಾಗೂ ಜಲಮಂಡಳಿ ನಿರ್ಧರಿಸಿದೆ. ಬುಧವಾರ (ಜ.21)ದಿಂದಲೇ ಕಾರ್ಯಾಚರಣೆ ಶುರುವಾಗಲಿದೆ.
ನಗರದ ವಿವಿಧೆಡೆ ಒಳಚರಂಡಿ ಅಳವಡಿಸಿಕೊಳ್ಳದ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ನೇರವಾಗಿ ಮಳೆ ನೀರು ಕಾಲುವೆಗೆ ಹರಿಬಿಡಲಾಗುತ್ತಿದೆ. ಈ ತ್ಯಾಜ್ಯನೀರು ನೇರವಾಗಿ ಕೆರೆಯನ್ನು ಸೇರುತ್ತಿದೆ. ಇದರಿಂದಾಗಿ ಕೆರೆ ಕಲುಷಿತಗೊಳ್ಳುತ್ತಿರುವುದಲ್ಲದೆ ಅಲ್ಲಿನ ಜಲಚರಗಳು ಸಾವಿಗೀಡಾಗುತ್ತಿವೆ. ಜತೆಗೆ ಅಂತರ್ಜಲ ಕೂಡ ಕಲುಷಿತಗೊಳ್ಳುತ್ತಿದೆ. ಮಳೆನೀರು ಕಾಲುವೆಗಳಿಗೆ ತ್ಯಾಜ್ಯದ ನೀರು ಹರಿಬಿಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೆಂಗಳೂರು ಕೆರೆಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಹಸಿರು ನ್ಯಾಯಾಧಿಕರಣ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಂತಹದೊಂದು ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಒಳಚರಂಡಿ ಸಂಪರ್ಕ ಪಡೆಯದೆ ರಾಜಕಾಲುವೆಗಳಿಗೆ ತ್ಯಾಜ್ಯ ಬಿಡುವ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಕಳೆದ ಬಾರಿ 250 ಕಟ್ಟಡಗಳ ಪತ್ತೆ: ಕಳೆದ ವರ್ಷ ಬೆಳ್ಳಂದೂರು ಕೆರೆ ಸುತ್ತಮುತ್ತಲ ಭಾಗದಲ್ಲಿ ಅನಧಿಕೃತವಾಗಿ ಮಳೆನೀರು ಕಾಲುವೆಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಬಿಟ್ಟಿರುವ 250ಕ್ಕೂ ಅಧಿಕ ಕಟ್ಟಡಗಳನ್ನು ಜಲಮಂಡಳಿ ವಿಶೇಷ ತಂಡವು ಪತ್ತೆ ಹಚ್ಚಿತ್ತು. ಈ ಕಟ್ಟಡಗಳಿಗೆ ಅಕ್ಟೋಬರ್ನಲ್ಲಿ ನೋಟಿಸ್ ನೀಡಿತ್ತು. ತ್ಯಾಜ್ಯನೀರು ಸ್ಥಗಿತಗೊಳಿಸಿ, ಎಸ್ಟಿಪಿ ಅಳವಡಿಸಿಕೊಳ್ಳಿ ಅಥವಾ ಜಲಮಂಡಳಿಯ ಒಳಚರಂಡಿ ಸಂಪರ್ಕ ಪಡೆಯಿರಿ ಎಂದು ಹೇಳಲಾಗಿತ್ತು. ಅಂತೆಯೇ 80 ಕಟ್ಟಡಗಳು ಜಲಮಂಡಳಿಯಿಂದ ಸಂಪರ್ಕ ಪಡೆದಿವೆ. ಉಳಿದ ಕಟ್ಟಡ ಮಾಲೀಕರು ಜಲಮಂಡಳಿ ಕೊಟ್ಟಿರುವ ನೋಟಿಸ್ಗೆ ಕ್ಯಾರೆ ಎಂದಿಲ್ಲ.
ತ್ಯಾಜ್ಯ ನೀರು ಬಿಟ್ಟಿದ್ದಕ್ಕೆ ನೋಟಿಸ್ ಪಡೆದ ಕಟ್ಟಡಗಳ ಮಾಲೀಕರ ಪೈಕಿ ಕೆಲವರು ಎಚ್ಚೆತ್ತುಕೊಂಡು ಒಳಚರಂಡಿ ಸಂಪರ್ಕ ಪಡೆದಿದ್ದಾರೆ. ಮಳೆ ನೀರು ಕಾಲುವೆಗೆ ತ್ಯಾಜ್ಯನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ನಗರದೆಲ್ಲೆಡೆ ಸಮೀಕ್ಷೆ ನಡೆಸುವ ಮುಖಾಂತರ ಒಳಚರಂಡಿ ಸಂಪರ್ಕವಿಲ್ಲದ ಕಟ್ಟಡಗಳನ್ನು ಗುರುತಿಸಿ ತ್ಯಾಜ್ಯನೀರು ಕೆರೆಗೆ ಸೇರದಂತೆ ಕ್ರಮ ವಹಿಸಲಾಗುವುದು. | ಕೆಂಪರಾಮಯ್ಯ ಜಲಮಂಡಳಿ ಪ್ರಧಾನ ಮುಖ್ಯ ಇಂಜಿನಿಯರ್
ಇಂದಿನಿಂದಲೇ ಕರೆಂಟ್ ಪೂರೈಕೆ ಸ್ಥಗಿತ
ತ್ಯಾಜ್ಯ ನೀರು ಬಿಟ್ಟಿರುವ ಆರೋಪದಲ್ಲಿ ನೋಟಿಸ್ ಪಡೆದಿರುವ ಕಟ್ಟಡಗಳಿಗೆ ಬುಧವಾರದಿಂದ ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ನೋಟಿಸ್ಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹ ಕಟ್ಟಡಗಳ ವಿರುದ್ಧ ವಿದ್ಯುತ್ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಸೈಯದ್ ಖಾಜಾ ತಿಳಿಸಿದ್ದಾರೆ. ನೋಟಿಸ್ ಕೊಟ್ಟ ನಂತರವೂ ಎಚ್ಚೆತ್ತುಕೊಳ್ಳದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಪೈಕಿ ವಿದ್ಯುತ್ ಸಂಪರ್ಕ ಕಡಿತವೂ ಒಂದಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
| ದ್ವಾರಕಾನಾಥ್ ಎಲ್