ಕೆರೂರ ಪಟ್ಟಣದ ಪ್ರವಾಸಿ ಮಂದಿರ ವಿದ್ಯುತ್ ಇಲ್ಲದೆ ಕತ್ತಲಲ್ಲಿರುವುದು. 
ಜಿಲ್ಲೆ

ಕೆರೂರ ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕ ಕಡಿತ

ಕೆರೂರ: ಪಟ್ಟಣದ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ಹೆಸ್ಕಾಂ ಸಿಬ್ಬಂದಿ ಗುರುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ಅಂದಾಜು 81 ಸಾವಿರ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದಾಗಿ ನಾಲ್ಕೈದು ದಿನಗಳಿಂದ ಪ್ರವಾಸಿ ಮಂದಿರ ನಿರ್ವಹಣಾ ಸಿಬ್ಬಂದಿ ಕುಟುಂಬ ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ.

ಪ್ರವಾಸಿ ಮಂದಿರಕ್ಕೆ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಸೋಲಾರ್ ರೂಪ ಟಾಪ್ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡದೆ ಹಾಗೇಯೇ ಬಿಡಲಾಗಿದೆ.

ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದರಿಂದಾಗಿ ಮಂದಿರಕ್ಕೆ ಬಂದ ಗ್ರಾಹಕರು ಖಾಸಗಿ ವಸತಿ ಗೃಹಗಳತ್ತ ಮುಖ ಮಾಡಿದ್ದಾರೆ.

ಒಂದೂವರೆ ವರ್ಷದಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವಾರು ಬಾರಿ ನೋಟಿಸ್ ನೀಡಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸದೆ ಹಿಂದೇಟು ಹಾಕುತ್ತಿದ್ದಾರೆ.

ವಿಜಯವಾಣಿ ಪ್ರತಿನಿಧಿ ದೂರವಾಣಿ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಂಪರ್ಕಿಸಿದರೂ ಸಂಪರ್ಕಕಕ್ಕೆ ಸಿಗುತ್ತಿಲ್ಲ.