ಜಿಲ್ಲೆ

ಶ್ರಮಜೀವಿ ಪೌರಕಾರ್ಮಿಕರ ಸಾಮಾಜಿಕ ಜೀವನ ಬದಲಾಗಲಿ: ಯೋಜನಾ ನಿರ್ದೇಶಕಿ ತುಷಾರಮಣಿ ಸಲಹೆ

reportermys

ಮಂಡ್ಯ: ಶ್ರಮಜೀವಿಗಳಾಗಿರುವ ಪೌರಕಾರ್ಮಿಕರ ಆರ್ಥಿಕ ಸ್ಥಾನಮಾನ ಜತೆಗೆ ಸಾಮಾಜಿಕ ಜೀವನವೂ ಬದಲಾವಣೆಯಾಗಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ, ನೇರ ಪಾವತಿ ಪೌರಕಾರ್ಮಿಕರ ಸಂಘ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಇಂದಿಗೂ ಪೌರಕಾರ್ಮಿಕರು ನಮ್ಮ ಮನೆ ಮುಂದಿನ ರಸ್ತೆ, ಚರಂಡಿ ಸ್ವಚ್ಛ ಮಾಡುತ್ತಾರೆ. ಆದರೆ ಎಷ್ಟು ಜನ ಹಬ್ಬ ಹರಿದಿನಗಳಲ್ಲಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಹಬ್ಬದ ಊಟ ಮಾಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮ್ಯಾನ್‌ಹೋಲ್ಗಳಿಗೆ ಇಳಿದು ಕೆಲಸ ಮಾಡುವ ವೃತ್ತಿಯನ್ನು ಈ ಸಮಾಜದಲ್ಲಿ ಯಾರೂ ಕೂಡ ಮಾಡುವುದಿಲ್ಲ. ಮನೆಯ ಮುಂದೆ ಸಣ್ಣ ಚರಂಡಿ ಕಟ್ಟಿಕೊಂಡರೆ, ಹುಲ್ಲು ಬೆಳೆದಿದ್ದರೆ ಪೌರಕಾರ್ಮಿಕರನ್ನು ಕಳಿಸಿ ಎಂದು ಹೇಳುತ್ತಾರೆ. ಪೌರಕಾರ್ಮಿಕರು ಹಲವು ವರ್ಷದಿಂದ ಇದೇ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಆ ವೃತ್ತಿಯನ್ನು ನಾನು ಅವಮಾನಿಸುತ್ತಿಲ್ಲ. ಆದರೆ ಪೌರಕಾರ್ಮಿಕರ ಮಕ್ಕಳು ಅದೇ ವೃತ್ತಿ ಮಾಡುವುದು ಬೇಡ. ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಮಾನ ಪಡೆಯಲು ಪ್ರಯತ್ನ ಮಾಡಿದರೆ, ಅವರ ಸಾಮಾಜಿಕ ಸ್ಥಾನಮಾನಗಳು ಕೂಡ ಬದಲಾಗುತ್ತವೆ ಎಂದು ಸಲಹೆ ನೀಡಿದರು.
ಇರುವ ಅವಕಾಶ ಬಳಸಿಕೊಂಡು ನಿಮ್ಮ ಮುಂದಿನ ಪೀಳಿಗೆ ಈ ಕೆಲಸದಲ್ಲಿ ಮುಂದುವರಿಯದಂತೆ, ಬೇರೆ ಉನ್ನತ ಕೆಲಸ ಮಾಡುವಂತೆ ಪ್ರಯತ್ನಿಸಬೇಕು. ಸರಿಯಾದ ಮಾರ್ಗದರ್ಶನ ಸಿಕ್ಕರೆ ಕಂಪನಿ ಮಾಡಬಹುದು. ಸುಸಜ್ಜಿತ ಮನೆ, ಕಾರು ಎಲ್ಲವನ್ನೂ ಹೊಂದುವಂತಹ ಸ್ಥಾನಮಾನ ಸಿಗಬಹುದು. ಇಂತಹ ಸಮಾರಂಭಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು. ಆಗ ಅವರು ನಮ್ಮ ಪಾಲಕರು ಯಾವ ಕೆಲಸ ಮಾಡುತ್ತಿದ್ದಾರೆ. ಮುಂದೆ ನಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಮನಗಾಣುತ್ತಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಸಮಾರಂಭ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ಸದಸ್ಯರಾದ ಮಂಜುಳಾ, ಪೂರ್ಣಿಮಾ, ಮಹಾದೇವ, ಅರುಣ್‌ಕುಮಾರ್, ಶ್ರೀಧರ್, ಸೌಭಾಗ್ಯ, ವಿದ್ಯಾ, ಶ್ರೀನಿವಾಸ, ಪೌರಾಯುಕ್ತ ಮಂಜುನಾಥ್, ಪೌರಕಾರ್ಮಿಕರ ಸಂಘದ ಎಂ.ಬಿ.ನಾಗಣ್ಣ, ಸೋಮಸುಂದರ್, ಮಹಾದೇವ, ನಾಗರಾಜು, ಲಿಂಗಮಯ್ಯ ಇತರರಿದ್ದರು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.