ಪುತ್ತೂರು: ನಗರಗಳ ನಡುವಿನ ವಾಹನ ಸಂಚಾರ ದಟ್ಟಣೆಯಿಂದ ರಸ್ತೆ ಚತುಷ್ಪತವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಉಪ್ಪಿನಂಗಡಿ-ಪುತ್ತೂರು ನಡುವಿನ ರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಲಾಗುತ್ತಿದ್ದು, ಹೊಸದಾಗಿ ಅಭಿವದ್ಧಿಯಾದ ರಸ್ತೆ ಸಂಪೂರ್ಣ ಹದೆಗೆಟ್ಟುಹೋಗಿದೆ. ಕೆಲವು ಭಾಗದಲ್ಲಿ ವಾಹನಗಳು ಹೂತು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಶಾಂತಿನಗರದಿಂದ ನೆಕ್ಕಿಲಾಡಿವರೆಗೆ ಕಳೆದ ಮೇ ತಿಂಗಳ ಸಮಯದಲ್ಲಿ ಡಾಂಬರು ಹಾಕಲಾಗಿತ್ತು. ಮಳೆಗಾಲಕ್ಕೂ ಮೊದಲೇ ಕಾಮಗಾರಿಯನ್ನು ನಡೆಸಬೇಕೆಂಬ ತರಾತುರಿಯಲ್ಲಿ ಮಣ್ಣು ಹಾಕಿದ ಸ್ಥಳಗಳಿಗೆ ಸರಿಯಾದ ರೀತಿಯಲ್ಲಿ ರೋಲಿಂಗ್ ಮಾಡಿಲ್ಲ ಎಂಬ ಆರೋಪ ಕೇಳಿ ಬರುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಡಾಂಬರು ನೀರಿನ ಜತೆಗೆ ಹರಿದು ನದಿ ಸೇರಿದೆ. ಜಲ್ಲಿ ಎದ್ದು ರಸ್ತೆಗಳಲ್ಲಿ ವಾಹನ ಓಡಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಮಾಡಿರುವ ರಸ್ತೆಯ ಕೆಮ್ಮಾಯಿಂದ ದಾರಂದಕುಕ್ಕುವರೆಗೆ ಮಳೆ ಬಂದಾಗ ಸರಾಗವಾಗಿ ನೀರು ಹರಿಯಲು ಅವಕಾಶ ವಿಲ್ಲದೆ, ಕೆರೆಯಾಗಿ ಪರಿವರ್ತನೆಯಾಗುತ್ತದೆ. ಪ್ರತಿ ವರ್ಷ ಮಳೆಗಾಲ ಕಳೆಯುತ್ತಿದ್ದಂತೆ ಹೊಂಡಗಳು ಪ್ರತ್ಯಕ್ಷವಾಗುತ್ತಿದ್ದು, ನಿರ್ವಹಣೆಯೂ ಸರಿಯಾಗಿಲ್ಲ ನಡೆಯುತ್ತಿಲ್ಲ. ಅವೈಜ್ಞಾನಿಕ ಕಳಪೆ ಕಾಮಗಾರಿ, ಅಸಮರ್ಪಕ ಚರಂಡಿ ನಿರ್ವಹಣೆಯೇ ಸಮಸ್ಯೆಗಳಿಗೆ ಮೂಲವಾಗಿದೆ.
ರಸ್ತೆ ನಿರ್ಮಾಣವಾಗಿ ಎರಡು ತಿಂಗಳಲ್ಲಿ ಸಂಪೂರ್ಣ ಕಿತ್ತು ಹೋಗಿ, ಮಣ್ಣು ಕಾಣುವ ಹಂತಕ್ಕೆ ತಲುಪಿರುವುದರಿಂದ ಕಾಮಗಾರಿಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇತ್ತೀಚಿನ ದಿನದಲ್ಲಿ ರಸ್ತೆಗಳು ವರ್ಷವನ್ನೂ ಪೂರೈಸದೆ ಹಾಳಾಗುತ್ತಿವೆ. ಗುಣಮಟ್ಟವನ್ನು ಪರಿಶೀಲನೆ ನಡೆಸುವವರು ಕಚೇರಿಯಿಂದಲೇ ಕಾಮಗಾರಿಯ ದಢೀಕರಣ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ರಸ್ತೆಯಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ಇದಕ್ಕೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯಕ್ಕೆ ಗುತ್ತಿಗೆದಾರರು ಮುಂದಾಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಕೆಲವು ಭಾಗದಲ್ಲಿ 2ರಿಂದ 3 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಸಣ್ಣ ವಾಹನಗಳು ಇಳಿದರೆ ಹತ್ತುವುದಕ್ಕೆ ಪರದಾಡಬೇಕಾಗುತ್ತದೆ. ಕೆಲವು ಭಾಗದಲ್ಲಿ ವಾಹನಗಳು ರಸ್ತೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ.
ಪುತ್ತೂರು ನಗರಕ್ಕೆ ನೆಕ್ಕಿಲಾಡಿಯಿಂದ ನೀರು ಪೂರೈಕೆ ಮಾಡುವ ಯೋಜನೆಯನ್ನು ಜಲಸಿರಿಗೆ ನೀಡಿದ ಮೇಲೆ ವಿವಿಧ ಮೋರಿಗಳನ್ನು ಬ್ಲಾಕ್ ಮಾಡಿ ಪೈಪ್‌ಲೈನ್ ಅಳವಡಿಸಲಾಗಿದೆ. ಮಳೆಗಾಲದಲ್ಲಿ ನೀರು ಸರಾಗ ಹರಿಯದ ಸಂದರ್ಭ ದುರಸ್ತಿಗಾಗಿ ವಿವಿಧ ಕಡೆಯಲ್ಲಿ ಅಗೆದು ಹಾಕಿ ರಸ್ತೆಯನ್ನು ಹಾಳುಗೆಡಹುವ ಕಾರ್ಯವನ್ನು ಜಲಸಿರಿ ಮಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಯೋಜನೆಯನ್ನು ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದಾಗ ಪ್ರಾರಂಭಿಸಲಾಗಿದ್ದು, ಮಠಂದೂರು ಅವಧಿಯಲ್ಲಿ ಮುಂದುವರಿಸಲಾಗಿತ್ತು. ಈಗ ಅಶೋಕ್ ಕುಮಾರ್ ರೈ ಕಾಲದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ ಹಾರಾಡಿಯಿಂದ ಕೆಮ್ಮಾಯಿ, ದ್ವಿತೀಯ ಹಂತದಲ್ಲಿ ಕೆಮ್ಮಾಯಿಯಿಂದ ಸೇಡಿಯಾಪು, ಮೂರನೇ ಹಂತದಲ್ಲಿ ವಿನಾಯಕ ನಗರದಿಂದ ಶಾಂತಿನಗರ ಕಾಮಗಾರಿಯನ್ನು ನಡೆಸಲಾಗಿತ್ತು.
ಬೈಕ್, ಬಸ್‌ನಲ್ಲಿ ಪ್ರಯಾಣಿಸುವವರಿಗೆ ದಿನನಿತ್ಯ ನರಕ ದರ್ಶನವಾಗುತ್ತದೆ. ಸಮಯ, ಇಂಧನ ವ್ಯರ್ಥ, ವಾಹನ ರಿಪೇರಿಗೂ ಖರ್ಚು, ಜತೆಗೆ ಬೆನ್ನು ನೋವಿನಂತಹ ಸಮಸ್ಯೆಯನ್ನೂ ಎದುರಿಸುವಂತಾಗಿದೆ. ರಸ್ತೆ ನಿರ್ಮಿಸಿ ತಿಂಗಳು ಕಳೆಯುವ ಮುನ್ನವೇ ಚಂದ್ರನ ಕುಳಿಗಳಂತೆ ಹೊಂಡ ಬಿದ್ದಿದೆ ಎಂದ ಮೇಲೆ ಗುಣಮಟ್ಟ ಕಳಪೆಗಿಂತಲೂ ಕಡೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹರ್ಷಿತ್ ಪಿಂಡಿವನ, ಉಪನ್ಯಾಸಕರು, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು.ಹರ್ಷಿತ್ ಪಿಂಡಿವನ, ಉಪನ್ಯಾಸಕರು, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು.