ಕಕ್ಕೇರಿ: ತಾಳಗುಪ್ಪ-ಬೆಳಗಾವಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಖಾನಾಪುರ ತಾಲೂಕಿನ ಬೀಡಿಯಿಂದ ಲಿಂಗನಮಠ ಕ್ರಾಸ್ ವರೆಗಿನ ರಸ್ತೆ ಕಳೆದ ಎರಡು ವರ್ಷಗಳಿಂದ ತಗ್ಗು-ಗುಂಡಿಗಳು ಬಿದ್ದು ಹದಿಗೆಟ್ಟಿದ್ದು, ವಾಹನ ಸವಾರರು ನಿತ್ಯ ಪ್ರಯಾಸ ಪಡುವಂತಾಗಿದೆ.
ರೈತರ ತರಕಾರಿ ತುಂಬಿದ ವಾಹನ, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಸಹಸ್ರಾರು ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿವೆ. ತಗ್ಗ-ಗುಂಡಿಮಯವಾಗಿರುವ ರಸ್ತೆಯಲ್ಲಿ ವಾಹನ ಸವಾರರು ಹಗಲಿನಲ್ಲಿ ಹೇಗೋ ಸಾವರಿಸಿಕೊಂಡು ಸಾಗುತ್ತಾರೆ. ರಾತ್ರಿ ಸಮಯದಲ್ಲಿ ಸ್ವಲ್ಪ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಧಾರವಾಡದಿಂದ ರಾಮನಗರ ಮಾರ್ಗವಾಗಿ ಖಾನಾಪುರ ಸಂಪರ್ಕ ರಸ್ತೆಯಲ್ಲೂ ಸಮಸ್ಯೆ ಭಿನ್ನವಾಗಿಲ್ಲ. ಹೀಗಾಗಿ, ದೊಡ್ಡ ಗುಂಡಿಗಳು ಬಿದ್ದಿದ್ದು, ಹೊಂಡದಂತೆ ನಿರ್ಮಾಣಗೊಂಡಿವೆ. ವಾಹನ ಸವಾರರಿಗೆ ಅಧಿಕ ಇಂಧನ ವ್ಯಯದ ಜತೆಗೆ ಸಮಯವನ್ನು ವ್ಯಯಿಸುವ ಅನಿವಾರ್ಯತೆ ಎದುರಿಸುವಂತಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಬೀಡಿಯಿಂದ ಲಿಂಗನಮಠ ಕ್ರಾಸ್ ವರೆಗೆ ರಸ್ತೆ ದುರಸ್ತಿ ಮಾಡಲಾಗಿದೆಯಾದರೂ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂಬುದು ಸ್ಥಳೀಯರ ದೂರು. ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಪ್ರಯಾಣಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈಗಲಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಿ ರಸ್ತೆ ದುರಸ್ತ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.