ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಭಾಸ್ಕರ ಪೈ ಸರ್ಕಾರಿ ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಿಂದ ಎಂ.ಭಾಸ್ಕರ ಪೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲಕ ಕೊಡಪಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ದಶಕಗಳಿಂದ ಅಭಿವೃದ್ಧಿಗೊಂಡಿಲ್ಲ. ಪ್ರತಿನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳು, ಮೀನುಗಾರರು ಸಂಚರಿಸುತ್ತಿದ್ದು, ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ನೀಡುತ್ತಾ ಬಂದಿರುವ ಬೇಡಿಕೆಗೆ ಯಾರೂ ಸ್ಪಂದಿಸಿಲ್ಲ. ಶೀಘ್ರದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುಮಾರು 100ರಿಂದ 150 ಮನೆ ಮಂದಿಗೆ ಸಂಚಾರಕ್ಕೆ ಈ ರಸ್ತೆಯೇ ದಾರಿ. ರಸ್ತೆ ಅಭಿವೃದ್ಧಿಗೆ ಸಲ್ಲಿಸಿದ್ದ ಮನವಿಗಳು ಮೂಲೆಗೆ ಸೇರಿವೆ. ಇಲ್ಲಿ ತನಕ ಯಾವ ಅಧಿಕಾರಿಯೂ ಸ್ಪಂದಿಸದೆ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ದಶಕಗಳ ಹಿಂದೆ ಈ ರಸ್ತೆ ನಿರ್ಮಿಸಲಾಗಿದೆ. ಇದುವರೆಗೆ ಕಾಯಕಲ್ಪ ಕಂಡಿಲ್ಲ. ರಸ್ತೆಗೆ ಹಾಕಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬಾ ಅಲ್ಲಲ್ಲಿ ಹರಡಿಕೊಂಡಿವೆ. ವಾಹನಗಳು ಸಂಚರಿಸುವಾಗ ಜಲ್ಲಿ ಕಲ್ಲುಗಳು ಹಾರಿ ಹಲವು ಮಂದಿಗೆ ಗಾಯಗಳಾಗಿರುವ ಘಟನೆಗಳಿವೆ. ಎದ್ದಿರುವ ಧೂಳಿನಿಂದ ಜನರು ಅದರಲ್ಲೂ ಮಕ್ಕಳು ವೃದ್ಧರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ರಸ್ತೆ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಶಾಸಕರು ಸೇರಿದಂತೆ ಎಲ್ಲ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿ ತನಕ ರಸ್ತೆಯನ್ನು ಅಭಿವೃದ್ಧಿಗೆ ಯಾರೂ ಮುತುವರ್ಜಿ ವಹಿಸಿಲ್ಲ. ರಸ್ತೆಯಲ್ಲಿ ಎದ್ದೇಳುವ ಧೂಳಿನಿಂದ ಮಕ್ಕಳ ಆರೋಗ್ಯ ಹಾಳಾಗುತ್ತಿದೆ. ಈ ರಸ್ತೆಯಲ್ಲಿ ನಡೆದಾಡುವುದೆ ಕಷ್ಟವಾಗಿದೆ. ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿಗೊಳಿಸಬೇಕು -ಪ್ರದೀಪ್ ಸ್ಥಳೀಯ ನಿವಾಸಿ