ಜಿಲ್ಲೆ

ಕುಮಾರಧಾರಾ ಹೆದ್ದಾರಿಯಲ್ಲಿ ಹೊಂಡ

ಸುಬ್ರಹ್ಮಣ್ಯ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಬಳಿ ಹೆದ್ದಾರಿಯಲ್ಲಿ ಬೃಹತ್ ಹೊಂಡ ನಿರ್ಮಾಣಗೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಹೊಂಡ-ಗುಂಡಿಗಳನ್ನು ದುರಸ್ತಿ ಮಾಡದೇ ಇರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಂಡಕ್ಕೆ ಅಳತೆ ಮಾಪಕ ಹಿಡಿದು ಈ ಹೊಂಡದ ಅಗಲ, ಆಳದ ಅಳತೆ ಮಾಡುವ ಮೂಲಕ ಚಾಲಕರು ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಹೊಂಡಗಳಿಗೆ ಕಾಯಕಲ್ಪ ಒದಗಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಸುಬ್ರಹ್ಮಣ್ಯದಿಂದ ಧರ್ಮಸ್ಥಳ, ಉಪ್ಪಿನಂಗಡಿ, ಬೆಂಗಳೂರನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಭಾರಿ ಮಳೆ ಕಾರಣದಿಂದ ಕುಮಾರಧಾರಾದ ಬಳಿ ಹೊಂಡ ಗುಂಡಿಗಳಿಂದ ತುಂಬಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ, ಸ್ಥಳೀಯ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಕೇವಲ ಕುಮಾರಧಾರಾ ಮಾತ್ರವಲ್ಲದೆ ಈ ರಸ್ತೆಯಲ್ಲಿ ಕುಲ್ಕುಂದ, ವೆಂಕಟಾಪುರ ಸೇರಿದಂತೆ ಇತರ ಕಡೆಗಳಲ್ಲಿ ಹೊಂಡಗಳು ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಹೊಂಡ ಅಳತೆ ಮಾಡಿದ ಜನತೆ

ರಸ್ತೆಯ ಹೊಂಡಗಳನ್ನು ಚಾಲಕರು ಮಂಗಳವಾರ ಟೇಪು ಹಿಡಿದು ಅಳತೆ ಮಾಡಿದರು. ಈ ಮೂಲಕ ಸಾರ್ವಜನಿಕರು ವ್ಯಂಗ್ಯ ರೀತಿಯಲ್ಲಿ ಅಸಮಾಧಾನ ಹೊರಹಾಕಿ ಗಂಭೀರತೆ ತೊರಿಸಿದರು. ಕುಮಾರಧಾರಾ ಸೇತುವೆ ಬಳಿ 12 ಫೀಟ್ ಅಗಲಕ್ಕೆ, ಮೂರು ಫೀಟ್ ಆಳದ ಹೊಂಡವಿದ್ದು ಸೀತಾರಾಮ ಗೌಡ, ದಿನೇಶ್, ಉಮೇಶ್ ಮತ್ತಿತರರು ಹೊಂಡದ ಅಳತೆ ಮಾಡಿ ಇದರಿಂದಾಗುವ ಅಪಾಯ ತಿಳಿಸಿದರು. ದೂರದೂರುಗಳಿಂದ ಬರುವ ಪ್ರಯಾಣಿಕರಿಗೆ ಹೊಂಡದ ಆಳ ತಿಳಿಯದೆ ಸಂಭಾವ್ಯ ಅಪಾಯ ತಪ್ಪಿಸಲು ಸಂಬಂಧಪಟ್ಟವರು ಶೀಘ್ರ ಸ್ಪಂದಿಸಲು ಈ ಮೂಲಕ ವಿನಂತಿಸಿದರು. ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಿ ರಾಜ್ಯ ಹೆದ್ದಾರಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ, ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.