ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೇಂದ್ರೀಕೃತ ಹವಾನಿಯಂತ್ರಿತ (ಎಸಿ) ವ್ಯವಸ್ಥೆಯಲ್ಲಿ ಸಮಸ್ಯೆಯುಂಟಾದ ಪರಿಣಾಮ ಆರೋಗ್ಯ ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ತುರ್ತು ಪ್ರಕರಣ ಹೊರತುಪಡಿಸಿ ಇತರೆ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ.
ಆಸ್ಪತ್ರೆಯು 200ಕ್ಕೂ ಅಧಿಕ ಹಾಸಿಗೆಗಳನ್ನು ಹೊಂದಿದ್ದು, ಒಮ್ಮೆಗೆ ಆರು ಶಸ್ತ್ರಚಿಕಿತ್ಸೆ ನಡೆಸುವ ಶಸ್ತ್ರಚಿಕಿತ್ಸಾ ಕೊಠಡಿಗಳ ಸಾಮರ್ಥ್ಯ ಹೊಂದಿದೆ. ನಿತ್ಯ 30 ರಿಂದ 40 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿತ್ತು. ಪ್ರತಿದಿನ ಸಾವಿರಾರು ಹೊರರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ, ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ಆಸ್ಪತ್ರೆಯ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ ಉಪಕರಣಗಳಿಗೆ ಹಾನಿಯುಂಟಾಗಿದ್ದು, ಕಟ್ಟಡದ ಎಸಿ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಶಸ್ತ್ರಚಿಕಿತ್ಸೆಗೆ ತೊಂದರೆಯಾಗಿದ್ದು ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದವನ್ನು ಮುಂದೂಡುವಂತೆ ಆಸ್ಪತ್ರೆಯ ವಿಶೇಷಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ಇದು ರೋಗಿಗಳಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ಇನ್ನು ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ರೋಗಿಗಳಿಗೆ ಉಂಟಾದ ಅನಾನೂಕೂಲಕ್ಕೆ ವಿಷಾದ ವ್ಯಕ್ತಪಡಿಸಿರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಹಾಗೂ ಡೀನ್ ಡಾ.ರಮೇಶ್ ಕೃಷ್ಣ, ಶೀಘ್ರವೇ ವ್ಯವಸ್ಥೆ ಸರಿಪಡಿಸು ಭರವಸೆ ನೀಡಿದ್ದಾರೆ.
ದುರಸ್ಥಿ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಒಂದೆರೆಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರ ಆಸ್ಪತ್ರೆ ವೇಳಾಪಟ್ಟಿಯಂತೆ ಆಯ್ದ ಶಸ್ತ್ರಚಿಕಿತ್ಸೆಗಳನ್ನು ಪುನರಾಂಭಿಸಲಾಗುವುದು. ಹಾಗೂ ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಡಾ.ರಮೇಶ್ ಸ್ಪಷ್ಟಪಡಿಸಿದ್ದಾರೆ.