ಜಿಲ್ಲೆ

ಮಳೆ ಹಿನ್ನೆಲೆ ಕ್ರೀಡಾಕೂಟ ಮುಂದೂಡಿಕೆ

ಹನೂರು: ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಿಗದಿಯಾಗಿದ್ದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ರಾಮಾಪುರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕೆಲವು ಪಂದ್ಯಗಳು ಪೂರ್ಣಗೊಂಡಿವೆ. ಇನ್ನು ನಡೆಯಬೇಕಿದ್ದ ಪಂದ್ಯಗಳನ್ನು ಜು.30ಕ್ಕೆ, ಹಾಗೆಯೇ ಜು. 26 ರಂದು ನಡೆಯಬೇಕಿದ್ದ ಮಾರ್ಟಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು 31ಕ್ಕೆ ಮುಂದೂಡಲಾಗಿದೆ. ಜು. 29 ರಂದು ನಿಗದಿಯಾಗಿದ್ದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಮುಂದೂಡಲಾಗಿದ್ದು, ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು. ಈ ಬಗ್ಗೆ ಕ್ರೀಡಾಕೂಟದ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ದೈಹಿಕ ಶಿಕ್ಷಕರು ಮನದಟ್ಟು ಮಾಡಿಕೊಳ್ಳಬೇಕು. ಜತೆಗೆ ಕ್ರೀಡಾಕೂಟವನ್ನು ನಿಗದಿಪಡಿಸಿರುವ ದಿನಾಂಕದಂದು ಕರ್ತವ್ಯಕ್ಕೆ ಹಾಜರಾಗಬೇಕು. ಈ ಸಂಬಂಧ ಮುಖ್ಯ ಶಿಕ್ಷಕರು ಅಗತ್ಯ ಕ್ರಮವಹಿಸುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.