ಮುಂಡರಗಿ: ತಾಲೂಕಿನ ಬಿದರಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಕೊರತೆ ಕಾರಣದಿಂದಾಗಿ ಮುಂದೂಡಿದ ಘಟನೆ ಗುರುವಾರ ನಡೆದಿದೆ.
ಗ್ರಾಪಂನ ಒಟ್ಟು 12ಸದಸ್ಯರ ಪೈಕಿ ಐವರು ಸದಸ್ಯರು ಚುನಾವಣೆ ಪ್ರಕ್ರಿಯೆ ಸ್ಥಳದಲ್ಲಿದ್ದರು. ಕೋರಂ ಭರ್ತಿಗೆ ಕನಿಷ್ಠ 6 ಸದಸ್ಯರು ಬೇಕಿತ್ತು. ಹೀಗಾಗಿ, ಚುನಾವಣೆ ಮುಂದೂಡಲಾಯಿತು. ಮತ್ತೆ ಚುನಾವಣೆ ನಡೆಯುವ ಕುರಿತು ಮುಂದಿನ ದಿನಾಂಕ ನಿಗದಿಪಡಿಸಿಲ್ಲ.
ಬಿದರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುನೀತಾ ನಾಗಪ್ಪ ಹಾರೋಗೇರಿ ಹಾಗೂ ಕಮಲಾಕ್ಷಿ ಹನಮಂತಪ್ಪ ವರದಿ ನಾಮಪತ್ರ ಸಲ್ಲಿಸಿದ್ದರು. ಸುನೀತಾ ಅವರು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರದ ಬಗ್ಗೆ ಕೆಲ ಗ್ರಾಮಸ್ಥರು, ಡಿಎಸ್‌ಎಸ್ ಮುಖಂಡರು ತಕರಾರು ವ್ಯಕ್ತಪಡಿಸಿದರು. ಹೀಗಾಗಿ ಬಿದರಹಳ್ಳಿ ಗ್ರಾ.ಪಂ.ಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು, ಕೆಲವರ ನಡುವೆ ವಾಗ್ವಾದಗಳು ನಡೆದವು. ಸ್ಥಳಕ್ಕೆ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಭೇಟಿ ನೀಡಿ ಚರ್ಚಿಸಿದರು.
ಗ್ರಾ.ಪಂ.ಯ ಚುನಾವಣೆ ಪ್ರಕ್ರಿಯೆ ಸ್ಥಳದಲ್ಲಿದ್ದ ಐವರು ಸದಸ್ಯರು ಸಹ ಹೊರನಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಗೆ ಕೋರಂ ಕೊರತೆ ಕಾರಣ ಚುನಾವಣೆ ಮುಂದೂಡಲಾಗಿದೆ ಎಂದು ಚುನಾವಣೆ ಅಧಿಕಾರಿ ವಿಶ್ವನಾಥ ಹೊಸಮನಿ ತಿಳಿಸಿದರು.