ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಸಿ ಮತ್ತು ಸಿ+ ಪಡೆದ ವಿದ್ಯಾರ್ಥಿಗಳ ಲಿತಾಂಶ ಸುಧಾರಣೆಗಾಗಿ ಮೇ.15ರಿಂದ ಜೂ.5ರವರೆಗೆ ನಡೆಯಬೇಕಿದ್ದ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ರಜೆ ಅವಧಿಯಲ್ಲಿ ನಡೆಸಲು ಉದ್ದೇಶಿಸಿದ್ದ ವಿಶೇಷ ತರಗತಿ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮೇ.15ರಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು. ಮಾತ್ರವಲ್ಲದೆ ಹೆಸರಿಗೆ ಮಾತ್ರ ರಜಾ ಸಹಿತ ಇಲಾಖೆ ಎಂದು ಪರಿಗಣಿಸಿ, ರಜಾ ಅವಧಿಯಲ್ಲೂ ಬಿಡುವಿಲ್ಲದ ರೀತಿಯಲ್ಲಿ ಕೆಲಸ ಹಂಚಿಕೆ ಮಾಡಲಾಗುತ್ತಿರುವುದು ಶೋಚನೀಯ. ರಜೆಯ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಮೌಲ್ಯಮಾಪನ, ಚುನಾವಣಾ ತರಬೇತಿ, ಚುನಾವಣಾ ಕಾರ್ಯ ಹಾಗೂ ಬಿಎಲ್‌ಒಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದರು.
ಇದಲ್ಲದೆ ಪ್ರಸ್ತುತ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ನಡುವೆ ರಜೆ ಅವಧಿಯಲ್ಲಿಯೇ ವಿಶೇಷ ತರಗತಿ ಮಾಡುವಂತೆ ಏಕಾಏಕಿ ಆದೇಶ ಹೊರಡಿಸಿರುವುದರಿಂದ ಪಾಲಕರು ಹಾಗೂ ಮಕ್ಕಳು ಪೂರ್ವನಿಯೋಜಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗಿದೆ. ಆದ್ದರಿಂದ ಮೇ.28ರಿಂದ ಎಲ್ಲ ಶಾಲೆಗಳು ಪ್ರಾರಂಭವಾಗಲಿದೆ. ಅಂದಿನಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವುದು ಸೂಕ್ತವೆಂದು ಒತ್ತಾಯಿಸಿದ್ದರು. ಜತೆಗೆ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿ ಆದೇಶ ಹೊರಡಿಸಿರುವ ನಿರ್ದೇಶಕರು, ಸರ್ಕಾರ ಸೂಚನೆಗಳನ್ವಯ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಮುಂದೂಡಲಾಗಿದೆ. ಅಂತೆಯೇ ಮೇ.29ರಿಂದ ಜೂ.13ರವರೆಗೆ ನಡೆಸುವಂತೆ ತಿಳಿಸಲಾಗಿದೆ. ಮಾತ್ರವಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದೆಂದು ತಿಳಿಸಿದ್ದಾರೆ.