RAJU ALAGUR 
ಜಿಲ್ಲೆ

ಡಾ.ಸಿಂಗ್ ನಿಧನ ಹಿನ್ನೆಲೆ ‘ಬಂದ್’ ಮುಂದೂಡಿಕೆ; ಮಾಜಿ ಶಾಸಕ ರಾಜು ಆಲಗೂರ

ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಮಾನತ್ತಿಗೆ ಆಗ್ರಹಿಸಿ ಡಿ.28 ರಂದು ನೀಡಲಾಗಿದ್ದು ‘ವಿಜಯಪುರ ಬಂದ್’ ಹೋರಾಟವನ್ನು ಮುಂದೂಡಲಾಗಿದೆ ಎಂದು ಮಾಜಿ ಶಾಸಕ ರಾಜು ಆಲಗೂರ ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನ ಹಿನ್ನೆಲೆ ಹೋರಾಟ ಮುಂದೂಡಲಾಗಿದೆ. ಡಿ. 30 ರಂದು ಬಂದ್ ಆಚರಿಸಲು ತೀರ್ಮಾನಿಸಲಾಗಿದೆ. ಅಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಜಿಲ್ಲಾದ್ಯಂತ ಬಂದ್ ಆಚರಿಸಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈಗಾಗಲೇ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಂಘಟನೆಗಳ ಒಕ್ಕೂಟ, ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳು ಸೇರಿದಂತೆ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ ಒಳಗೊಂಡು ಅನೇಕ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ನಿಗದಿತ ದಿನದಂದು ಯಶಸ್ವಿಯಾಗಿ ಬಂದ್ ಆಚರಿಸಲಾಗುತ್ತಿತ್ತು. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಬಂದ್ ಆಚರಣೆಯನ್ನು ಡಿ. 30ಕ್ಕೆ ಮುಂದೂಡುವುದು ಅನಿವಾರ್ಯವಾಯಿತು ಎಂದರು.

ಡಾ.ಸಿಂಗ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಬಂದ್ ಮುಂದೂಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು.

ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಡಾ.ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಇಡೀ ದೇಶ ಶೋಕ ಆಚರಿಸುತ್ತಿದೆ. ವೈಯಕ್ತಿಕವಾಗಿ ಮತ್ತು ಪಕ್ಷದಿಂದಲೂ ಶೋಕ ಆಚರಿಸಲಾಗುವುದು. ಡಿ. 30 ರಂದು ಬಂದ್ ಆಚರಣೆ ಯಶಸ್ವಿಯಾಗಿ ನಡೆಸಲಾಗುವುದು ಎಂದರು.

ಮುಖಂಡರಾದ ಸೋಮನಾಥ ಕಳ್ಳಿಮನಿ, ಎಂ.ಸಿ.ಮುಲ್ಲಾ, ಅನಿಲ ಹೊಸಮನಿ, ಚಂದ್ರಶೇಖರ್ ಕೊಡಬಾಗಿ, ರಮೇಶ ಆಸಂಗಿ, ಮಲ್ಲಿಕಾರ್ಜುನ ಬಟಗಿ, ಸಿದ್ದು ರಾಯಣ್ಣನವರ, ಫಯಾಜ್ ಕಲಾದಗಿ, ಮಹಾದೇವಿ ಗೋಕಾಕ್ ಮತ್ತಿತರರಿದ್ದರು.