ಯಳಂದೂರು: ತಾಲೂಕಿನಲ್ಲಿ ವಿವಿಧ ಪ್ರಕರಣಗಳಲ್ಲಿ ಮೃತಪಟ್ಟವರ ಶವಗಳ ಮರಣೋತ್ತರ ಪರೀಕ್ಷೆ ಯಳಂದೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಯುತ್ತಿಲ್ಲ. ಹಾಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಶವ ಸಾಗಿಸಿ ಕಾಯಬೇಕಾದ ಪರಿಸ್ಥಿತಿ ಇದೆ.
ತಾಲೂಕಿನಲ್ಲಿ ಅಪಘಾತ, ಅನಾಹುತ, ಆಕಸ್ಮಿಕವಾಗಿ ಮೃತಟ್ಟವರು, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಮೃತಪಟ್ಟ ಶವಗಳ ಮರಣೋತ್ತರ ಪರೀಕ್ಷೆಗೆ ಯಳಂದೂರು ಆಸ್ಪತ್ರೆಗೆ ಬರಬೇಕು. ಆದರೆ ಆಸ್ಪತ್ರೆಯಲ್ಲಿ ಶವಾಗಾರವೇ ಇಲ್ಲದಿರುವುದು ದುರಂತ.
ತಾಲೂಕಿನ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಶವಾಗಾರದ ಕಟ್ಟಡ ಇತ್ತು. 35 ಕೋಟಿ. ರೂ. ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಮಾಡಲು 2024ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ಮಾಡಿದ ಬಳಿಕ ಇಲ್ಲಿದ್ದ ಹಳೆಯ ಶವಾಗಾರ ಕಟ್ಟಡವನ್ನು ನೆಲಸಮ ಮಾಡಲಾಯಿತು.
ಮರಣೋತ್ತರ ಪರೀಕ್ಷೆ ನಡೆಸಲು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ತಾಲೂಕಿನ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯರು, ಆಡಳಿತ ಮಂಡಳಿ ಈ ಬಗ್ಗೆ ಕಾಳಜಿ ವಹಿಸದೆ ಸಮಸ್ಯೆಯಾಗಿದೆ. ತಾಲೂಕಿನ ಅಗರ, ಅಲ್ಕೆರೆ ಅಗ್ರಹಾರ, ಯರಿಯೂರು, ಗುಂಬಳ್ಳಿ, ಸೇರಿದಂತೆ ಇತರ ಗ್ರಾಮಗಳಲ್ಲಿ ಯಾವುದಾದರೂ ಪ್ರಕರಣಗಳಲ್ಲಿ ಮೃತಪಟ್ಟ ಶವಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಬೇಕಾದರೆ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿದೆ. ಇದರಿಂದ ಮೊದಲೇ ಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ಈ ಕಾಮಗಾರಿ ಆರಂಭವಾದ ನಂತರ ಇದುವರೆವಿಗೂ 25ಕ್ಕೂ ಹೆಚ್ಚು ಜನರ ಶವ ಪರೀಕ್ಷೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದೆ.
ತಡವಾಗುತ್ತಿರುವ ಕಾರ್ಯ
ವಿವಿಧ ಕಾರಣದಿಂದ ಮೃತಪಟ್ಟವರ ಶವಗಳನ್ನು ತಾಲೂಕಿನ ಆಸ್ಪತ್ರೆಗೆ ತಂದು ಹಾಕಲಾಗುತ್ತಿದೆ. ಆದರೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುವ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡದ ಕಾರಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋಗಬೇಕು. ಜತೆಗೆ ಶವ ಸಾಗಿಸುವ ವಾಹನ ಇಲ್ಲದೆ ಅತಿ ಹೆಚ್ಚು ಹಣ ನೀಡಿ ಶವ ಸಾಗಿಸುವ ಬೇರೆ ವಾಹನದ ಮೂಲಕ ಕುಟುಂಬದವರು ತೆಗೆದುಕೊಂಡು ಹೋಗಬೇಕಿದೆ.
ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಹರಸಾಹಸಪಡಬೇಕಾದ ಸ್ಥಿತಿಯಿದೆ. ಕಷ್ಟಪಟ್ಟು ಸಾಗಿಸಿದರೂ ರಾತ್ರಿಯಿಡೀ ಕಾಯಬೇಕು. ಅಲ್ಲಿ ವೈದ್ಯರು, ಪೊಲೀಸರು ಸಮ್ಮುಖದಲ್ಲಿ ಪರೀಕ್ಷೆಯನ್ನು ಮಾಡುವುದರಿಂದ ಶವ ಪರೀಕ್ಷೆ ಕಾರ್ಯವೂ ವಿಳಂಬವಾಗುವುದರ ಜತೆಗೆ ಸಂಬಂಧಿಕರ ಕುಟುಂಬ ವರ್ಗಕ್ಕೂ ತೊಂದರೆಯಾಗುತ್ತಿದೆ.
ಸರ್ಕಾರಿ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಮುಗಿಯಲು ಹಲವು ವರ್ಷಗಳೇ ಬೇಕಾಗಿರುವುದರಿಂದ ಅಲ್ಲಿಯತನಕ ಪರ್ಯಾಯವಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ. ಯಳಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಬೇಕಾದ ಮರಣೋತ್ತರ ಪರೀಕ್ಷೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು. ಇದರಿಂದ ಮೃತರ ಕುಟುಂಬ ಸದಸ್ಯರು ಪರದಾಡುವುದನ್ನು ತಪ್ಪಿಸಲು ಸರ್ಕಾರಿ ಆಸ್ಪತ್ರೆಯಲ್ಲೇ ತಾತ್ಕಾಲಿಕ ವ್ಯವಸ್ಥೆ ಮಾಡುವುದರ ಮೂಲಕ ಅನುಕೂಲ ಮಾಡಿಕೊಡಬೇಕು. ಕುಮಾರ್ ನಿವಾಸಿ, ದುಗ್ಗಹಟ್ಟಿ ಯಳಂದೂರು ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತಿರುವ ಕುರಿತು ಸಾರ್ವಜನಿಕರು ಹೇಳಿದ್ದಾರೆ. ತಾತ್ಕಾಲಿಕವಾಗಿ ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು. ಡಾ.ಶ್ರೀಧರ್ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ, ಯಳಂದೂರು