ಜಿಲ್ಲೆ

ಅಂಚೆ ಮತದಾನ: ಮೊದಲ ದಿನ ಶೇ.56 ಮತದಾನ

ಆರ್.ತುಳಸಿಕುಮಾರ್

ಬೆಂಗಳೂರು: ಲೋಕಸಭಾ ಚುನಾವಣೆಗೆ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಅಂಚೆ ಮತದಾನಕ್ಕೆ ಚಾಲನೆ ಸಿಕ್ಕಿದೆ. ಮೊದಲ ದಿನ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವವರ ಪೈಕಿ ಶೇ.56.74 ಮತದಾರರು ಮನೆಯಿಂದ ಮತ ಚಲಾಯಿಸಿದರು.

ಚುನಾವಣಾ ಸಿಬ್ಬಂದಿ ಬೆಳಗ್ಗೆಯಿಂದ ಈ ಮೊದಲೇ ನೋಂದಣಿ ಮಾಡಿಕೊಂಡಿರುವ ಮತದಾರರ ಮನೆಗಳಿಗೆ ತೆರಳಿದರು. ಸಾಮಾನ್ಯ ಚುನಾವಣೆಗಳಲ್ಲಿ ಅನುಸರಿಸುವ ಪದ್ಧತಿಯಂತೆ ಮತದಾರರ ಪಟ್ಟಿಯಲ್ಲಿ ಹೆಸರು ಖಾತರಿಪಡಿಸಿಕೊಂಡು ಗುರುತಿನ ಚೀಟಿ ಪಡೆದು ಮತಪತ್ರವನ್ನು ನೀಡಲಾಯಿತು. ಮತಪತ್ರದಲ್ಲಿದ್ದ ಅಭ್ಯರ್ಥಿಗಳ ಮುಂದಿದ್ದ ಚೌಕದಲ್ಲಿ ಪೆನ್‌ನಿಂದ ಟಿಕ್ ಮಾರ್ಕ್ ಮಾಡಿದವರಿಂದಲೇ ಮತಪೆಟ್ಟಿಗೆಗೆ ಹಾಕಿಸಲಾಯಿತು. ಇದನ್ನು ಮನೆಯ ಇತರ ಸದಸ್ಯರಿಂದ ಖಾತರಿಪಡಿಸಿಕೊಳ್ಳಲಾಯಿತು. ಬಹುತೇಕ ಹಿರಿಯ ಮತದಾರರಿಗೆ ಚುನಾವಣಾ ಸಿಬ್ಬಂದಿ ನೆರವು ನೀಡಿದರು.

ನಗರದಲ್ಲಿ ಸುಮಾರು 25 ಸಾವಿರ ಅಂಗವಿಕರಿದ್ದರೂ, 302 ಮಂದಿ ಮಾತ್ರ ಅಂಚೆ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು.

28 ಕ್ಷೇತ್ರಗಳಲ್ಲೂ ಮತದಾನಕ್ಕೆ ಚಾಲನೆ:

ನಗರದಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಸೆಂಟ್ರಲ್ ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ತಲಾ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಇನ್ನುಳಿದ ನಾಲ್ಕರಲ್ಲಿ 3 (ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಾಗೂ ಯಲಹಂಕ ವಿಧಾನಸಭೆ ಕ್ಷೇತ್ರವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿವೆ. ಹೀಗಾಗಿ 28 ವಿಧಾನಸಭಾ ಕ್ಷೇತ್ರಗಳು ಐದು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದರೂ, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಗೆ ಬರುವುದರಿಂದ ರಾಜಧಾನಿಯನ್ನೇ ಕೇಂದ್ರವಾಗಿರಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ತಿಂಗಳ 18ರವರೆಗೆ ಮತದಾನಕ್ಕೆ ಅವಕಾಶವಿರುತ್ತದೆ.

ಅಂಚೆ ಮತದಾನಕ್ಕಾಗಿ ನಿಯೋಜಿತರಾಗಿದ್ದ ಚುನಾವಣಾ ಸಿಬ್ಬಂದಿ ಹಿರಿಯ ಮತದಾರರ ಮನೆಗೆ ತೆರಳಲು ಕಾಲ್ನಡಿಗೆಯಲ್ಲೇ ತೆರಳಬೇಕಾಯಿತು. ಬಿಸಿಲಿನ ಝಳದಿಂದ ಬಳಲಿದ ಸಿಬ್ಬಂದಿ ಅಲ್ಲಲ್ಲಿ ನೆರಳಿನಲ್ಲಿ ಆಶ್ರಯ ಪಡೆದು ಕರ್ತವ್ಯ ನಿರ್ವಹಿಸಿದರು.

18 ಮತದಾರರು ಸಾವು:

ಈ ಬಾರಿಯ ಲೋಕಸಭಾ ಚುನಾವಣೆಗೆ ಹಿರಿಯ ಮತದಾರರ ವಯಸ್ಸನ್ನು 85 ವರ್ಷಕ್ಕೆ ನಿಗದಿ ಮಾಡಲಾಗಿದೆ. ಇದರನ್ವಯ ನಗರದ 28 ಕ್ಷೇತ್ರಗಳಲ್ಲಿ ಅಂಚೆ ಮತದಾನದ ವೇಳೆ 18 ಮಂದಿ ನೋಂದಾಯಿತ ಮತದಾರರು ಮೃತಪಟ್ಟಿರುವುದು ದೃಢಪಟ್ಟಿದೆ. ಇವರೆಲ್ಲರೂ ಕಳೆದ ತಿಂಗಳು ಮತದಾರರ ಪಟ್ಟಿಯಲ್ಲಿ ಹಿರಿಯ ಮತದಾರರೆಂದು ಗುರುತಿಸಿಕೊಂಡಿದ್ದರು. ಆದರೆ, ಮತದಾನಕ್ಕೂ ಮುನ್ನ ವಯೋಸಹಜ ಹಾಗೂ ಕೆಲ ಮಂದಿ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.

ಮೊದಲ ದಿನದ ಅಂಚೆ ಮತದಾನದ ವಿವರ:

ಲೋಕಸಭಾ ಕ್ಷೇತ್ರ ನೋಂದಾಯಿತ ಶೇ.ವಾರು ಮತ

ಬೆಂಗಳೂರು ಉತ್ತರ 1,803 54.63

ಬೆಂಗಳೂರು ದಕ್ಷಿಣ 2,224 59.04

ಬೆಂಗಳೂರು ಸೆಂಟ್ರಲ್ 1,787 74.82

ಬೆಂ. ಗ್ರಾ./ಚಿಕ್ಕಬಳ್ಳಾಪುರ 2,044 40.31

ಒಟ್ಟು ನೋಂದಾಯಿತರು 7,858 56.74

ಜಯನಗರ, ಮಲ್ಲೇಶ್ವರದಲ್ಲಿ ಹೆಚ್ಚು ಮತದಾರರು:

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 85 ವಯಸ್ಸು ದಾಟಿದ 1.15 ಲಕ್ಷ ಮತದಾರರಿದ್ದು, ಈ ಪೈಕಿ 7,556 ಮಂದಿ ಮಾತ್ರ ಮನೆಯಿಂದ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ನೋಂದಾಯಿತರು ಜಯನಗರ (580) ಹಾಗೂ ಮಲ್ಲೇಶ್ವರ (506) ವಿಧಾನಸಭಾ ಕ್ಷೇತ್ರಗಳಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಪದ್ಮನಾಭನಗರ (423), ರಾಜಾಜಿನಗರ (399), ಬೆಂಗಳೂರು ದಕ್ಷಿಣ (365), ಆನೇಕಲ್ (333), ಯಲಹಂಕ (325). ಅತಿ ಕಡಿಮೆ ನೋಂದಾಯಿತರಾದ ಕ್ಷೇತ್ರ ಚಾಮರಾಜಪೇಟೆ (30).