ಜಿಲ್ಲೆ

ಅಂಚೆ ಇಲಾಖೆಯಿಂದ ಗ್ರಾಹಕರಿಗೆ ಮಹತ್ವದ ಸೇವೆ - ಸುಧಾಕರ ಮಲ್ಯ

Mangaluru - Hariprasad Rai



ಮಂಗಳೂರು : ದೇಶದಲ್ಲಿ ಅಂಚೆ ಇಲಾಖೆಯು ಗ್ರಾಹಕರಿಗೆ ಮಹತ್ತರವಾದ ಸೇವೆ ಒದಗಿಸುತ್ತಾ ಬಂದಿದೆ. ಗ್ರಾಮೀಣ ಭಾಗದ ಜನತೆಗೆ ವಿಶೇಷ ಸೇವೆ ನೀಡುತ್ತಿದೆ. ಎಲ್ಲರ ಅಭ್ಯುದಯ ಎನ್ನುವ ಧ್ಯೇಯದೊಂದಿಗೆ ವಿಶ್ವ ಅಂಚೆ ದಿನವನ್ನು ಇಲಾಖೆ ಆಚರಿಸುತ್ತಿದ್ದು, ಗ್ರಾಹಕರಿಗೆ ಅಂಚೆ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅಂಚೆ ಇಲಾಖೆಯು ಬರಹಗಾರಿಕೆಯಲ್ಲಿ ಖುಷಿ :ಡಿಜಿಟಲ್ ಯುಗದಲ್ಲಿ ಪತ್ರದ ಮಹತ್ವ’ ಕುರಿತು ರಾಷ್ಟ್ರ ಮಟ್ಟದ ಪತ್ರ ಬರಹ ಸ್ಪರ್ಧೆ ಹಮ್ಮಿಕೊಂಡಿದೆ. 18 ವರ್ಷದೊಳಗಿನವರು ಮತ್ತು 18 ವರ್ಷ ಮೇಲ್ಪಟ್ಟವರು ಈ ಎರಡು ವಿಭಾಗಳಲ್ಲಿ ಸ್ಪರ್ದೆ ನಡೆಯಲಿದೆ. ಆಸಕ್ತರು ತಮ್ಮ ಬರಹವನ್ನು 1,000 ಪದಗಳ ಒಳಗೆ ಬರೆದು ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕರ ಕಚೇರಿಗೆ ಡಿ.14ರ ಒಳಗೆ ಕಳುಹಿಸಬಹುದು ಎಂದರು.
ಅಂಚೆ ಇಲಾಖೆಯು ಗ್ರಾಹಕರಿಗೆ ಆನ್‌ಲೈನ್ ಪಾವತಿ, ನ್‌ಟೆ, ಆರ್‌ಟಿಜಿಎಸ್ ಸಹಿತ ಹಲವು ಸೌಲಭ್ಯವನ್ನು ಕಲ್ಪಿಸಿದೆ. ಮಂಗಳೂರಿನ ನಾಲ್ಕು ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಸೌಲಭ್ಯ ಒದಗಿಸಲಾಗಿದೆ. ಅಂಚೆ ಜನಸಂಪರ್ಕ ಅಭಿಯಾನದಡಿ ರಜೆಯ ದಿನಗಳಲ್ಲಿ ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಆಯಾ ಊರಿನಲ್ಲೇ ಆಧಾರ್ ನೋಂದಣಿ ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿದೇಶಿ ರಫ್ತಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಉತ್ತೇಜಿಸಲು ‘ಡಾಕ್ ನಿರ್ಯಾತ್ ಕೇಂದ್ರ’ಗಳನ್ನು ತೆರೆಯಲಾಗಿದ್ದು, ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಸ್ಪಂದನೆ ಇದೆ. ರಫ್ತು ಮಾಡಲು ಪರವಾನಗಿ, ಪ್ರಮಾಣಪತ್ರ, ವಸ್ತು ವಿವರ, ರಫ್ತುದಾರರ ವಿವರಗಳನ್ನು ಡಾಕ್ ನಿರ್ಯಾತ್ ಕೇಂದ್ರದ ಪೋರ್ಟಲ್‌ನಲ್ಲಿ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಸಾಮಾನ್ಯ ಸ್ಪೀಡ್ ಪೋಸ್ಟ್‌ನಂತೆ 5ರಿಂದ 7 ದಿನಗಳಲ್ಲಿ ರಫ್ತು ಮಾಡಿರುವ ಉತ್ಪನ್ನಗಳು ನಿಗದಿತ ಸ್ಥಳಕ್ಕೆ ತಲುಪುತ್ತವೆ ಎಂದು ಸುಧಾಕರ ಮಲ್ಯ ತಿಳಿಸಿದರು.
ಇದೇ ಸಂದರ್ಭ ವಿಶ್ವ ಅಂಚೆ ದಿನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ದಿನೇಶ್ ಪಿ, ವಿಲ್ಸನ್ ಡಿಸೋಜ, ಯತಿನ್ ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ , ಮಾಜಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.