ಚನ್ನರಾಯಪಟ್ಟಣ : ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ವೇತನ, ಪಿಂಚಣಿ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಗುರುವಾರ ಮುಷ್ಕರ ನಡೆಸಿದರು. ಪಟ್ಟಣದ ಅಂಚೆ ಕಚೇರಿ ಮುಂಭಾಗ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಘೋಷಣೆಗಳನ್ನು ಕೂಗಿದರು.
ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ಎಂ.ಪಿ.ಚಿತ್ರಸೇನಾ ಮಾತನಾಡಿ, ನೂತನವಾಗಿ ನೇಮಕವಾಗಿರುವ ನೌಕರರಿಗೆ ಕೆಲಸದ ಹೊರೆಯ ಆಧಾರದ ಮೇಲೆ ವೇತನ ನಿಗದಿಗೊಳಿಸುವುದು, 8 ಗಂಟೆಗಳ ಅವಧಿಯ ಕೆಲಸ ನೀಡುವುದು, ಕಮಲೇಶ್ ಚಂದ್ರ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಕೋಶಾಧಿಕಾರಿ ನಾಗೇಶ್, ವಿಭಾಗೀಯ ಕಾರ್ಯದರ್ಶಿ ಸಂತೋಷ್ ಇತರರು ಭಾಗವಹಿಸಿದ್ದರು.