ಜಿಲ್ಲೆ

ಹೋಟೆಲ್​,ಬೇಕರಿಗಳಿಗೆ ಪೋಸ್ಟಾಕ್​ ಪ್ರಮಾಣಪತ್ರ ಕಡ್ಡಾಯ

ಹರೀಶ್​​ ಕೆ.ಸಿ.

ಬೆಂಗಳೂರು: ಆಹಾರ ಕಲಬೆರಕೆ ತಡೆಗೆ, ಹೋಟೆಲ್​ಗಳಲ್ಲಿ ಗುಣಮಟ್ಟ ಆಹಾರ ಲಭ್ಯತೆ ಉದ್ದೇಶದಿಂದ ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ರಾಜ್ಯದ ಎಲ್ಲ ಬಗೆಯ ಹೋಟೆಲ್​ಗಳು, ಬೇಕರಿಗಳು, ಆನ್​ಲೈನ್​ನಲ್ಲಿ ಪುಡ್​​ ಡೆಲಿವರಿ ಮಾಡುವ ಕಂಪನಿಗಳು ಹಾಗೂ ಪಿಜ್ಜಾ, ರ್ಬಗರ್​ ಮಾರಾಟ ಮಾಡುವ ಹೋಟೆಲ್​ಗಳು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ (ಪೋಸ್ಟಾಕ್​) ಪತ್ರ ಪಡೆಯುವುದು ಕಡ್ಡಾಯಗೊಳಿಸಿದೆ.

ರಾಜ್ಯದಲ್ಲಿ 6 ಲಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. ಅಂದಾಜು 14 ಲಕ್ಷ ಆಹಾರ ಉದ್ದಿಮೆಗಳು ಪ್ರಾಧಿಕಾರದಲ್ಲಿ ನೊಂದಾಣಿ ಮಾಡಿಕೊಂಡಿವೆ. ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಆದರೆ, ಬಹುತೇಕ ಹೋಟೆಲ್​, ರಸ್ತೆಬದಿಯಲ್ಲಿ ಮಾರಾಟ ಮಾಡುವವರು ಆಹಾರ, ಸಿಹಿ, ಖಾರ ತಿನಿಸು, ಕರಿದ ಪದಾರ್ಥಗಳಲ್ಲಿ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶ ಬಳಸಿ ಕಲಬೆರಕೆ ಆಹಾರ ಮಾರಾಟ ಮಾಡುತ್ತಿದ್ದಾರೆ. ಕಲಬೆರಕೆ ಆಹಾರ ಮತ್ತು ಗಂಭೀರ ರೋಗಗಳ ಪ್ರಮಾಣ ತಡೆಯುವ ಉದ್ದೇಶದಿಂದ ಪ್ರಾಧಿಕಾರವೂ, ಕಾನೂನಿನ ಅನ್ವಯ ಪ್ರತಿ ಆಹಾರ ಉದ್ಯಮಗಳು ಪೋಸ್ಟಾಕ್​ ಪಡೆಯವಂತೆ ನಿಯಮ ಜಾರಿಗೆ ತಂದಿದೆ. ಕಾಯ್ದೆ ಅನ್ವಯ 2006ರಿಂದ ಎಲ್ಲ ಆಹಾರ ಉದ್ದಿಮೆದಾರರು ಪೋಸ್ಟಾಕ್​ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಈ ಬಗ್ಗೆ 2017ರಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ರಸ್ತೆ ಬದಿ ಹೋಟೆಲ್​ ನಡೆಸುತ್ತಿರುವವರು ಸೇರಿ ಎಲ್ಲ ಬಗೆಯ ಹೋಟೆಲ್​ ಮಾಲೀಕರು ಕಡ್ಡಾಯವಾಗಿ ಆಹಾರ ವ್ಯಾಪಾರ ನಿರ್ವಾಹಕರಿಗೆ (ಎಫ್​ಬಿಒ)ಪೋಸ್ಟಾಕ್​ ಪತ್ರ ಪಡೆಯಬೇಕು. ಪ್ರತಿ ಆಹಾರ ವ್ಯಾಪಾರದ ಕಾರ್ಯಾಚರಣಾ ಆವರಣದ ಆಹಾರ ವಿತರಣೆಯಲ್ಲಿ ಎಲ್ಲ ಅಥವಾ ಕನಿಷ್ಠ 5 ಆಹಾರ ನಿರ್ವಾಹಕರು ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಪರವಾನಗಿ ಅಥವಾ ನೋಂದಣಿ ಸಂದರ್ಭದಲ್ಲಿ ಪೋಸ್ಟಾಕ್​ ಪ್ರಮಾಣ ಪತ್ರವನ್ನು ಅಗತ್ಯ ದಾಖಲೆ ಎಂದು ಪರಿಗಣಿಸಲಾಗಿದೆ. ಪ್ರಮಾಣ ಪತ್ರ ನೀಡುವ ಮುನ್ನ ನಿಗದಿತ ಶುಲ್ಕ ಕಟ್ಟಿಸಿಕೊಂಡು ಕೇಂದ್ರ ಸರ್ಕಾರದ ನೋಂದಾಯಿತ ತರಬೇತಿದಾರರಿಂದ ಒಂದು ದಿನ ಗುಣಟಮಟ್ಟ ಆಹಾರ ಕುರಿತು ಸೂಕ್ತ ತರಬೇತಿ ನಡೆಸಲಾಗುತ್ತದೆ. ಇದಾದ ಬಳಿಕ ಪರೀಕ್ಷೆ ನಡೆಸಿ ವಾರದೊಳಗೆ ಪೋಸ್ಟಾಕ್​ ಪ್ರಮಾಣ ಪತ್ರ ನೀಡಲಾಗುತ್ತದೆ.

ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಇಲಾಖೆಗಳ ಆಯುಕ್ತರು, ಆಹಾರ ಸುರತಾಧಿಕಾರಿಗಳು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪೋಸ್ಟಾಕ್​ ಪ್ರಮಾಣೀಕರಣ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಸೂಕ್ತ ತರಬೇತಿ ಪಡೆದ ನಂತರ ವ್ಯಾಪಾರ ನಡೆಸುವ ಸ್ಥಳಗಳಲ್ಲಿ ಪ್ರಮಾಣಪತ್ರವನ್ನು ಪ್ರದರ್ಶಿಸುವಂತೆ ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಲೋಬಲ್​ ಇನ್​ಸ್ಟಿಟ್ಯೂಟ್​ ಫಾರ್​ ಎಜುಕೇಶನ್​ ಬೆಂಗಳೂರು ಸಂಸ್ಥೆಯನ್ನು ಅಧಿಕೃತ ಮತ್ತು ಪ್ರಮಾಣೀಕೃತವಾಗಿ ಪೋಸ್ಟಾಕ್​ ಸೇವಾ ಪೂರೈಕೆದಾರೆಂದು ಗುರುತಿಸಲಾಗಿದೆ.