ಬೀದರ್: ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಮಾ. 8 ರಂದು ಬೀದರ್ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.
ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಮಚ್ಚೆ ಹಾಗೂ ಪದಾಧಿಕಾರಿಗಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಮ್ಮೇಳನದ ವೇದಿಕೆಗೆ ಸಾಹಿತಿ ಎಂ.ಜಿ. ಗಂಗನಪಳ್ಳಿ, ವಿಶ್ವನಾಥ ಇದಲಾಯಿಕರ್, ಮಹಾದ್ವಾರಕ್ಕೆ ಕಾಜಿ ಅರಶದ್ ಅಲಿ ಹಾಗೂ ಶಶಿಕಲಾ ಮಠಪತಿ ಅವರ ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ‘ಹರಟೆ ಕಟ್ಟೆ’ ಗೋಷ್ಠಿ ಆಯೋಜಿಸಲಾಗಿದೆ. ಶಿಕ್ಷಣಕ್ಕೆ ಕನ್ನಡ ಅಥವಾ ಆಂಗ್ಲ ಮಾಧ್ಯಮ ಕುರಿತು ಚರ್ಚೆ ನಡೆಯಲಿದೆ. ಮಾ. 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವೂ ಇರುವುದರಿಂದ ಮಹಿಳೆಯರನ್ನು ಗೌರವಿಸಲು ಮಹಿಳಾ ಗೋಷ್ಠಿ ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ನಾಲ್ಕು ಗೋಷ್ಠಿಗಳು ಜರುಗಲಿವೆ. ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ ಬಸವರಾಜ ಅವರ ನೇತೃತ್ವದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ಎತ್ತಿನ ಗಾಡಿಗಳು, ಕಲಾ ತಂಡಗಳು, ದಾರ್ಶನಿಕರು, ಕವಿಗಳ ವೇಷಧಾರಿಗಳು ಗಮನ ಸೆಳೆಯಲಿದ್ದಾರೆ ಎಂದು ಹೇಳಿದ್ದಾರೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಕುಟ್ಟಿದ ಗೋಧಿ ಹುಗ್ಗಿ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಅನ್ನ, ಸಾಂಬಾರು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಿಗ್ಗೆ 8ಕ್ಕೆ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಬಳಿಯಿಂದ ಸಮ್ಮೇಳನ ಸ್ಥಳದವರೆಗೆ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದ್ದು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 10.30ಕ್ಕೆ ಮಾಣಿಕಪ್ರಭು ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವಿಷ್ಣು ಎಂ. ಸಿಂಧೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಆಣದೂರಿನ ಭಂತೆ ಧಮ್ಮಾನಂದ ಮಹಾ ಥೆರೋ ನೇತೃತ್ವ, ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ ಸಮ್ಮುಖ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಪಂಡಿತ ಬಸವರಾಜ ಸಮ್ಮೇಳನಾಧ್ಯಕ್ಷರ ನುಡಿ, ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ಆಡಲಿದ್ದಾರೆ ಎಂದು ಹೇಳಿದ್ದಾರೆ.
ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮುಖ್ಯ ಅತಿಥಿಯಾಗಿ, ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಎಂ. ಗುಮತಾಪುರ, ಮುಖಂಡರಾದ ಬಾಬುವಾಲಿ, ಶರಣಪ್ಪ ಸಿಕೇನಪುರ, ಸೋಮಶೇಖರ ಬಿರಾದಾರ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಟಿ.ಆರ್. ದೊಡ್ಡೆ, ಶೀದೇವಿ ಅಂಬಾದಾಸ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಅಪ್ಪಾರಾವ್ ಸೌದಿ, ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 1.30ಕ್ಕೆ ಮೊದಲ ಗೋಷ್ಠಿ, ಮಧ್ಯಾಹ್ನ 2.30ಕ್ಕೆ ‘ಹರಟೆ ಕಟ್ಟೆ' ಎರಡನೇ ಗೋಷ್ಠಿ, ಮಧ್ಯಾಹ್ನ 3.30ಕ್ಕೆ ಮಹಿಳಾ ಗೋಷ್ಠಿ, ಸಂಜೆ 4.30ಕ್ಕೆ ಕವಿಗೋಷ್ಠಿ, ಸಂಜೆ 6.30ಕ್ಕೆ ಬಹಿರಂಗ ಅಧಿವೇಶನ, ಸಂಜೆ 6.45ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ ಎಂದು ಹೇಳಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಸಾಗರ್ ಖಂಡ್ರೆ, ಮಾಜಿ ಶಾಸಕ ಅಶೋಕ್ ಖೇಣಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ನಿರ್ಮಾಪಕ ಬಿ.ಜೆ. ವಿಷ್ಣುಕಾಂತ ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.