ಲಿಂಗದಹಳ್ಳಿ : ಧೂಪದಖಾನ್ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಮತ್ತು ಕಾಫಿ ತೋಟಗಳ ಕೂಲಿ, ಕಾರ್ಮಿಕರ ಮನವಿಗೆ ಸ್ಪಂದಿಸಿರುವ ಚಿಕ್ಕಮಗಳೂರು ಅಂಚೆ ಅಧೀಕ್ಷಕರು ಮತ್ತು ಅಂಚೆ ನಿರೀಕ್ಷಕರು ಧೂಪದ ಖಾನ್ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಸ್ಥಾಪನೆಗೆ ಅವಕಾಶ ನೀಡಿರುವುದಕ್ಕೆ ನಂದಿಬಟ್ಟಲು ಗ್ರಾಪಂನಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಹೇಳಿದರು.
ಧೂಪದ ಖಾನ್ ಗ್ರಾಮದ ಬಹು ದಿನಗಳ ಬೇಡಿಕೆಯಾಗಿದ್ದ ಅಂಚೆ ಕಚೇರಿ ಸ್ಥಾಪನೆಯಿಂದ, ಬಡವರು, ಕೂಲಿ ಕಾರ್ಮಿಕರು, ವಿಶೇಷವಾಗಿ ಸಂಧ್ಯಾಸುರಕ್ಷಾ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು, ವಿಶೇಷ ಚೇತನರು ಸೇರಿದಂತೆ ಈ ಭಾಗದ ನೂರಾರು ಮಂದಿಗೆ ಅನುಕೂಲವಾಗಿದೆ. ಅಂಚೆ ಕಚೇರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮದ ಹಿರಿಯರಾದ ಪುಂಗಾವನಮ್ ಮೇಸ್ತ್ರಿ ಮಾತನಾಡಿ, ವಿವಿಧ ಮಾಶಾಸನಗಳನ್ನು ಪಡೆದುಕೊಳ್ಳುವ ಮತ್ತು ಅಂಚೆ ಕಛೇರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ವಯಸ್ಸಾದ ಹಿರಿಯ ನಾಗರಿಕರು ದೂರದ ತಣಿಗೆಬೈಲಿನ ಅಂಚೆ ಕಚೇರಿಗೆ ಹೋಗಲು ಗ್ರಾಮಸ್ಥರ ಶ್ರಮ, ಹಣ ವ್ಯರ್ಥವಾಗುತ್ತಿತ್ತು. ಈಗ ಗ್ರಾಮದಲ್ಲೇ ಅಂಚೆಕಚೇರಿ ಆರಂಭವಾಗಿರುವುದು ಅನುಕೂಲವಾಗಿದೆ ಎಂದರು.
ಧೂಪದಖಾನ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜಪ್ಪ, ಸಹ ಶಿಕ್ಷಕ ಅರುಣ್‌ಕುಮಾರ್, ಧೂಪದಖಾನ್ ಕಾಫಿ ತೋಟದ ವ್ಯವಸ್ಥಾಪಕ ರಮೇಶ್‌ಗೌಡ, ಮಾಜಿ ಗ್ರಾಪಂ ಸದಸ್ಯ ಜೆ.ಕೃಷ್ಣನಾಯ್ಕ, ಗ್ರಾಮಸ್ಥರಾದ ಸೈಯದ್ ಸರೋಜಮ್ಮ, ಹೊನ್ನಮ್ಮ, ಜಯಬಾಯಿ, ಮಂಜಣ್ಣ, ಮುಂತಾದವರು ಹಾಜರಿದ್ದರು.