ಜಿಲ್ಲೆ

ರಾಣಿ ಚೆನ್ನಭೈರಾದೇವಿ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದ ರಾಷ್ಟ್ರಪತಿ

Uttara Kannada - Subash Hegde

ಕಾರವಾರ: `ಮೆಣಸಿನ ಕಾಳಿನ ರಾಣಿ' ಎಂದೇ ಪ್ರಸಿದ್ಧವಾಗಿರುವ ದಿಟ್ಟ ವನಿತೆ ಉತ್ತರ ಕನ್ನಡದ ರಾಣಿ ಚೆನ್ನಭೈರಾದೇವಿಯ ಚಿತ್ರವಿರುವ ಪೋಸ್ಟ್ ಕಾರ್ಡ್ನ್ನು ರಾಷ್ಟçಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಿದ್ದಾರೆ. ಪೋರ್ಚುಗೀಸರನ್ನು ಸೋಲಿಸಿ, ಅವರಿಂದ ಕಪ್ಪಕಾಣಿಕೆಯನ್ನು ಪಡೆದ, ಅವರಿಂದ `ರೈನಾ ಡಾ ಪಿಮೆಂಟಾ' ಎಂಬ ಬಿರುದು ಪಡೆದ ದಿಟ್ಟ ಆಡಳಿತಗಾರ್ತಿ ಚೆನ್ನಭೈರಾದೇವಿ. ಅತೀವ ಸಾಹಸ, ಚಾಣಾಕ್ಷ ರಾಜನೀತಿಯಿಂದ ಆಕೆ ಸುದೀರ್ಘ 54 ವರ್ಷಗಳ ಕಾಲ ಉತ್ತರ ಕನ್ನಡದ ಕರಾವಳಿ ಹಾಗೂ ಶಿವಮೊಗ್ಗದ ಮಲೆನಾಡಿನ ಪ್ರದೇಶವನ್ನು ಆಳಿದ್ದಳು. ದಾಲ್ಚಿನಿ, ಶುಂಠಿ, ಕಾಳು ಮೆಣಸು ಮುಂತಾದ ಸಾಂಬಾರು ಪದಾರ್ಥಗಳ ವ್ಯವಹಾರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಯುರೋಪಿಯನ್ ರಾಷ್ಟçಗಳಲ್ಲಿ ಬೇಡಿಕೆ ಬರುವಂತೆ ಮಾಡಿ ಇಲ್ಲಿನ ಆರ್ಥಿಕತೆಯನ್ನು ವೃದ್ಧಿಸಿದ್ದಳು. ಉನ್ನತ ಸಾಧನೆ ಮಾಡಿದ್ದರೂ ಆಕೆ ಒಬ್ಬ ಸಾಮಂತಳಾಗಿದ್ದಳು ಎಂಬ ಕಾರಣಕ್ಕೆ ಮುಖ್ಯವಾಹಿನಿಯ ಇತಿಹಾಸದಲ್ಲಿ ಆಕೆಯ ಹೆಸರೇ ಇರಲಿಲ್ಲ. ಅಂಚೆ ಇಲಾಖೆ ಆಕೆಯ ಸಾಧನೆಯನ್ನು ಗುರುತಿಸಿ, ಕಾರ್ಡ್ ಬಿಡುಗಡೆ ಮಾಡಿರುವುದು ಆಕೆಯ ಇತಿಹಾಸಕ್ಕೆ ಮಹತ್ವ ಸಿಕ್ಕಿದಂತಾಗಿದೆ. ರಾಜ್ಯಸಭಾ ಸದಸ್ಯರಾದ ಧರ್ಮಸ್ಥಳ ಧರ್ಮಾಽಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಪ್ರಹ್ಲಾದ ಜೋಶಿ, ಎಕ್ಸಲೆಂಡ್ ಅಕಾಡೆಮಿಯ ಯುವರಾಜ್, ಅವರ ಪತ್ನಿ ರಷ್ಮಿಕಾ, ಲೇಖಕ ಗಜಾನನ ಶರ್ಮಾ, ಸುರೇಂದ್ರ ಕುಮಾರ ಹೆಗ್ಗಡೆ, ಮಹೇಂದ್ರ ಸಿಂಗ್, ಮಹಾವೀರ ಕುಂದೂರ್, ಸಂತೋಷ ಕುಮಾರ್, ಸಂಪತ್ ಪಾಟೀಲ್ ಹಾಗೂ ಅಂಚೆ ಇಲಾಖೆಯ ಹಿರಿಯ ಅಽಕಾರಿಗಳು ಇದ್ದರು. ದಿಟ್ಟ ವನಿತೆ ಚೆನ್ನಭೈರಾದೇವಿ: ವಿಜಯ ನಗರ ಸಾಮ್ರಾಜ್ಯದ ಸಾಮಂತ ಮನೆತನವಾಗಿ ಉತ್ತರ ಕನ್ನಡ ಜಿಲ್ಲೆಯ ನಗರೆ ಪ್ರದೇಶವನ್ನು ಕೇಂದ್ರವಾಗಿಸಿಕೊಂಡು ಗೇರುಸೊಪ್ಪ ಸಂಸ್ಥಾನ 16 ನೇ ಶತಮಾನದಲ್ಲಿ ಆಡಳಿತ ನಡೆಸಿತ್ತು. ಕ್ರಿ.ಶ.1552 ರಿಂದ 1606 ರ ನಡುವೆ ಮಹಾ ಮಂಡಲೇಶ್ವರಿ ಚೆನ್ನಭೈರಾದೇವಿ ಆಡಳಿತ ನಡೆಸಿದ್ದಳು. ಆ ವೇಳೆಗೆ ಗೋವಾದಲ್ಲಿ ಆಡಳಿತ ನಡೆಸಿದ್ದ ಪೋರ್ಚುಗೀಸರು ಗೇರುಸೊಪ್ಪೆಯ ಸಂಸ್ಥಾನದ ಮೇಲೆ ಹಲವು ಬಾರಿ ದಾಳಿ ಮಾಡಿದ್ದರು. ಭಟ್ಕಳ ಪಟ್ಟಣವನ್ನು ಸುಟ್ಟು ಹಾಕಿದ್ದರು. ಚೆನ್ನಭೈರಾದೇವಿ 1959 ರಿಂದ 1970 ರವರೆಗೆ ಪೋರ್ಚುಗೀಸರ ಜತೆ ಹೋರಾಡಿ ಗೆಲುವನ್ನೂ ಸಾಽಸಿದ್ದಳು. ಹೊನ್ನಾವರದ ಗೇರುಸೊಪ್ಪ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ, ಕುಮಟಾದ ಮಿರ್ಜಾನ್‌ನಲ್ಲಿ ಆಕೆಯ ಆಡಳಿತದ ಕುರುಹುಗಳು ಲಭ್ಯವಾಗುತ್ತವೆ. ಕೆಲ ವರ್ಷಗಳ ಹಿಂದೆ ಗಜಾನನ ಶರ್ಮಾ ಎಂಬುವವರು `ಕರಿಮೆಣಸಿನ ರಾಣಿ ಚೆನ್ನಭೈರಾದೇವಿ' ಎಂಬ ಸಂಶೋಧನಾ ಕಾದಂಬರಿಯನ್ನು ಬರೆದಿದ್ದರು. ನಂತರ ಆಕೆಯ ಇತಿಹಾಸ, ಮಹತ್ವ ಸ್ಥಳೀಯರಿಗೆ ಅರಿವಿಗೆ ಬಂದಿತ್ತು.

ಕಾದಂಬರಿಕಾರಗಜಾನನ ಶರ್ಮಾ ರಾಣಿ ಚೆನ್ನಭೈರಾದೇವಿಯ ಕುರಿತು ಅಮೇರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಡಾ.ಹನ್ನಾ ಚಾಪೆಲ ವೋಜೋಸ್ಕಿ ತಮ್ಮ ಪ್ರಬಂಧದಲ್ಲಿ , `ಕ್ವೀನ್ ಎಲೆಜೆಬೆತ್ ಅವರ ಸಮಕಾಲೀನಳಾದ ರಾಣಿ ಚೆನ್ನಬೈರಾದೇವಿ ಆಕೆಯ ಪ್ರತಿರೂಪವಾಗಿದ್ದಾಳೆ' ಎಂದು ಉಲ್ಲೇಖಿಸಿದ್ದಾರೆ. ದೌರ್ಭಾಗ್ಯವೆಂದರೆ ವಿದೇಶಿಯರಿಂದ ಇಂಥಹ ಶ್ಲಾಘನೆ ಪಡೆದ ಚೆನ್ನಭೈರಾದೇವಿ ಅದೇಕೋ ನಮ್ಮ ಇತಿಹಾಸದ ಮುಖ್ಯವಾಹಿನಿಯ ಪುಟ ಅಲಂಕರಿಸಲೇ ಇಲ್ಲ. ಚೆನ್ನಭೈರಾದೇವಿಯ ಇತಿಹಾಸವನ್ನು ಕೇಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಕೆಯ ಸಾಧನೆಯನ್ನು ವಜ್ರಾಕ್ಷರಗಳಲ್ಲಿ ಬರೆಯಬೇಕು ಎಂದು ಹೇಳಿದರು.